ರಾಜ್ಯ

ಬಿಬಿಎಂಪಿಯಿಂದ ಕಗ್ಗದಾಸಪುರ ಕೆರೆ ಒತ್ತುವರಿ ಜಾಗ ತೆರವು

Manjula VN

ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ಸಿ ವಿ ರಾಮನ್ ನಗರ ವ್ಯಾಪ್ತಿಯ ಕಗ್ಗದಾಸನಪುರ ಜಾಗಗಳನ್ನು ಗುರುವಾರ ಬಿಬಿಎಂಪಿ ವತಿಯಿಂದ ತೆರವು ಮಾಡಲಾಯಿತು. 

ಪಾಲಿಕೆ ವ್ಯಾಪ್ತಿಯ ಪೂರ್ವ ವಲಯದ ಸಿ.ವಿರಾಮನ್ ನಗರದ ವಾರ್ಡ್ ನಲ್ಲಿರುವ ಕಗ್ಗದಾಸಪುರ ಕೆರೆಯಲ್ಲಿ ಒತ್ತುವರಿಯಾಗಿದ್ದ 2.08 ಎಕರೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಗೊಂಡಿದ್ದು, ಇದರಲ್ಲಿ 1 ಎಕರೆ 5 ಗುಂಟೆ ಜಾಗವನ್ನು ತೆರವು ಮಾಡಲಾಗಿದೆ. 

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಖ್ಯೆ 38401/2014 ರ ಅಡಿಯಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರ ಆದೇಶದಂತೆ ಈ ಕಾರ್ಯಾಚರಣೆಯನ್ನು ನಡೆಸಲಾಯಿತು.

47 ಎಕರೆ ಕೆರೆ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ಮೊದಲಿಗೆ ಪರಿಶೀಲನೆ ನಡೆಸಲಾಯಿತು. ಬಳಿಕ ಒತ್ತುವರಿಯಾಗಿರುವ ಜಾಗದಲ್ಲಿ ಬೇಲಿಗಳನ್ನು ಹಾಕಲಾಯಿತು. ಜಲಕಂಠೇಶ್ವರಿ ದೇವಸ್ಥಾನದ ಅರ್ಚಕರ ಮನೆಯನ್ನು ತೆರವುಗೊಳಿಸುವ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತ ನಿರ್ಧಾರ ಇನ್ನೂ ತೆಗೆದುಕೊಳ್ಳಲಾಗಿಲ್ಲ. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಪ್ರಕರಣವನ್ನು ಪ್ರಸ್ತಾಪಿಸುವಂತೆ ಈಗಾಗಲೇ ಉಪ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ನಡುವೆ ಐಶ್ವರ್ಯ ಲೇಕ್ ವ್ಯೂ ರೆಸಿಡೆನ್ಸಿ ಅಪಾರ್ಟ್ಮೆಂಟ್ ತೆರವುಗೊಳಿಸಲು ತಡೆಯಾಜ್ಞೆ ಇರುವುದರಿಂದ, ಕಾಂಪೌಂಡ್ ವಾಲ್, ಪಿಲ್ಲರ್ ಮತ್ತು ಬೆಸ್ಕಾಂ ಪವರ್ ಕನ್ವರ್ಟರ್ ಗಳನ್ನು ಒಳಗೊಂಡ 9 ಗುಂಟೆ ಭೂಮಿಯ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಇದರಂತೆ ಮಾತಾಪತಿ ಮೆರಿಡಿಯನ್ ಅಪಾರ್ಟ್‌ಮೆಂಟ್‌ನಲ್ಲಿನ ತೆರವು ಕಾರ್ಯಾಚರಣೆ ಕೂಡ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ. 

SCROLL FOR NEXT