ಬೆಂಗಳೂರು: ರಾಜ್ಯದಲ್ಲಿ ರೈತರು ಕೃಷಿ ಉದ್ದೇಶಕ್ಕಾಗಿ ಬಳಸುವ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲಾಗುತ್ತದೆ ಎಂಬ ಬಗ್ಗೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದು, ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಚಿಂತನೆ ಇಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ತಮ್ಮ ಕಚೇರಿಯ ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಪ್‌ಸೆಟ್ ಬಳಕೆಗೆ ಮೀಟರ್ ಅಳವಡಿಸುವ ಕುರಿತಾದ ಊಹಾಪೋಹಗಳನ್ನು ರೈತರು ನಂಬಬಾರದು ಎಂದು ಹೇಳಿದ್ದಾರೆ.
ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಸಂಬಂಧ, ಈಗಾಗಲೇ ಅಧಿಕಾರಿಗಳ ಸಭೆ ಕರೆದು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ. ಇಂಧನ ಇಲಾಖೆ ಆಳ ಮತ್ತು ಅಗಲಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಇಲಾಖೆಯನ್ನು ಜನಸ್ನೇಹಿಯನ್ನಾಗಿಸುವುದು ನಮ್ಮ ಮುಂದೆ ಇರುವ ಸವಾಲು ಎಂದು ತಿಳಿಸಿದ್ದಾರೆ.
ಲೈನ್‌ಮನ್‌ಗಳಿಂದ ವ್ಯವಸ್ಥಾಪಕ ನಿರ್ದೇಶಕರವರೆಗೆ ವಿವಿಧ ಹಂತಗಳ ಸಿಬ್ಬಂದಿ ಇಲಾಖೆಯಲ್ಲಿದ್ದಾರೆ. ಎಲ್ಲ ಹಂತಗಳಲ್ಲಿಯೂ ಸುಧಾರಣೆ ತರುವ ಮೂಲಕ ಇಲಾಖೆಯನ್ನು ಕ್ರಿಯಾಶೀಲಗೊಳಿಸುವ ಬಗ್ಗೆ ಆಲೋಚನೆ ನಡೆಸಿದ್ದೇನೆ. ಈ ವಿಚಾರವಾಗಿ ಅಧಿಕಾರಿಗಳ ಜತೆ ಎರಡು ಸುತ್ತಿನ ಸಬೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.