ರಾಜ್ಯ

ಕನ್ನಡೇತರರಿಗಾಗಿ ಪ್ರತ್ಯೇಕ ಪಠ್ಯಪುಸ್ತಕ ಮತ್ತು ಪರೀಕ್ಷಾ ವ್ಯವಸ್ಥೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಹಂಪಿ ಕನ್ನಡ ವಿವಿ ವಿನೂತನ ಕಾರ್ಯಕ್ರಮ

Harshavardhan M

ಬೆಂಗಳೂರು: ಕನ್ನಡೇತರರು ಕರುನಾಡ ಭಾಷೆ ಕನ್ನಡವನ್ನು ಕಲಿಯಲು ಉತ್ತೇಜನ ನೀಡುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಹಂಪಿ ಕನ್ನಡ ವಿವಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕನ್ನಡೇತರರಿಗಾಗಿಯೇ ಪ್ರತ್ಯೇಕ ಪಠ್ಯಪುಸ್ತಕ ಮತ್ತು ಪರೀಕ್ಷೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಆನ್ ಲೈನ್ ಮಾದರಿಯನ್ನೂ ಸಿದ್ಧಪಡಿಸಲಾಗುವುದು ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಪರಭಾಷೆ ಮಾತನಾಡುವ ಅಸಂಖ್ಯ ಮಂದಿಯಿದ್ದಾರೆ. ಅಂಥವರಿಗೆ ಕನ್ನಡ ಕಲಿಕೆಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಅವರ ಮನೆ ಬಾಗಿಲಿಗೇ ಕನ್ನಡ ಕಲಿಕೆಯನ್ನು ಕೊಂಡೊಯ್ಯುವ ಕಾರ್ಯಕ್ರಮ ರೂಪುಗೊಂಡಿತ್ತು. ಆದರೆ, ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆನ್ ಲೈನ್ ಪೋರ್ಟಲ್ ಅನ್ನೂ ಪ್ರಾರಂಭಿಸಿತ್ತು. ಆದರೆ ಅದೂ ಯಶ ಕಂಡಿರಲಿಲ್ಲ. 

ಹೀಗಾಗಿ ಇದೀಗ ಕನ್ನಡೇತರರಿಗಾಗಿ ಪ್ರತ್ಯೇಕ ಪಠ್ಯ ಪುಸ್ತಕ ಮತ್ತು ಪರೀಕ್ಷಾ ವ್ಯವಸ್ಥೆ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಎಲ್ಲಾ ಪ್ರಯತ್ನ ನಡೆಸುತ್ತಿರುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದ್ದಾರೆ. 

ನೂತನ ಕನ್ನಡೇತರರ ಪಠ್ಯಪುಸ್ತಕ ಮುಂದಿನ 6 ತಿಂಗಳಲ್ಲಿ ಸಿದ್ಧಗೊಳ್ಳುವ ವಿಶ್ವಾಸವನ್ನು ನಾಗಾಭರಣ ವ್ಯಕ್ತಪಡಿಸಿದ್ದಾರೆ. ಪಠ್ಯಪುಸ್ತಕವನ್ನು ಆನ್ ಲೈನಿನಲ್ಲಿ ಅಪ್ಲೋಡ್ ಮಾಡಲಾಗುವುದು. ಆಗ ಯಾರು ಬೇಕಾದರೂ ಪಠ್ಯಪುಸ್ತಕವನ್ನು ಡೌನ್ಲೋಡ್ ಮಾಡಿಕೊಳ್ಲಬಹುದಾಗಿದೆ.

ಕನ್ನಡ ಪರೀಕ್ಷೆ ಬರೆಯಲಿಚ್ಛಿಸುವ ಕನ್ನಡೇತರರಿಗೆ ವಿವಿ ಪರೀಕ್ಷೆ ನಡೆಸಲಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ನೀಡಲಾಗುವುದು. ಕನ್ನಡೇತರರು ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ಪ್ರಮಾಣಪತ್ರ ಉಪಯೋಗಕ್ಕೆ ಬರುತ್ತದೆ ಎಂದವರು ಹೇಳಿದ್ದಾರೆ.

SCROLL FOR NEXT