ರಾಜ್ಯ

ಬೆಂಗಳೂರು: ನವಜಾತ ಶಿಶು ಮಾರಾಟ ಪ್ರಕರಣ, ಮೂವರ ಬಂಧನ

Nagaraja AB

ಬೆಂಗಳೂರು: ನವಜಾತ ಶಿಶುವೊಂದರ ಮಾರಾಟ ಪ್ರಕರಣದಲ್ಲಿ ಮೂವರನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ತರನ್ನಂ ಬಾನು (38), ನಿಶಾತ್ ಕೌಸರ್ (45) ಮತ್ತು ಕೆ. ಸವುದ್ ಎಂದು ಗುರುತಿಸಲಾಗಿದೆ. ಸೋಮವಾರ ಅಗಡಿ ಆಸ್ಪತ್ರೆ ಬಳಿ ಪುರುಷ ಹಾಗೂ ಮಹಿಳೆಯೊಬ್ಬರು ಜಗಳವಾಡುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ವಿಚಾರಿಸಲಾಗಿ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸರು ಅವರಿಬ್ಬರನ್ನು ವಿಚಾರಣೆಗೊಳಪಡಿಸಲು ಯತ್ನಿಸಿದಾಗ ಪುರುಷ ಅಲ್ಲಿಂದ ಪರಾರಿಯಾಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ. ಆಡುಗೋಡಿ ನಿವಾಸಿ ತರನ್ನಂ ಬಾನು ಕೆಲವು ದಿನಗಳ ಹಿಂದೆ ಆಕೆಯ ಮನೆ ಕೆಲಸದಾಳು ಗಂಡು ಮಗುವಿಗೆ ಜನ್ಮ ನೀಡಿದ್ದು, ಅದನ್ನು ದೂರದ ಸಂಬಂಧಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾಳೆ.

ಮಗುವಿನ ತಂದೆ ಮುಬಾರಕ್ ಪಾಶ ಮಗುವಿನ ಮಾರಾಟ ಮಾಡಲು ನಿರ್ಧರಿಸಿ ಬಾನು ಜೊತೆಗೆ ಪಾಲು ಕುದುರಿಸಿದ್ದಾನೆ. ತಾಯಿಯನ್ನು ಮನವೊಲಿಸಿದ ಬಳಿಕ ಮಗುವನ್ನು ಹೊರಗಡೆ ತಂದು ಬಾನುಗೆ ಹಸ್ತಾಂತರಿಸಿದ್ದಾನೆ. ಅದನ್ನು ಆಕೆ ಮದುವೆಯಾಗಿ 15 ವರ್ಷ ಕಳೆದರೂ ಮಕ್ಕಳಿಲ್ಲದ ತನ್ನ ಸಂಬಂಧಿ ಸವೂದ್ ಅವರಿಗೆ ಮಾರಾಟ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ.

ಆ ಮಗುವಿಗೆ 1.30 ಲಕ್ಷ  ಕೊಡಲು ಒಪ್ಪಿದ ಸವುದ್,  ಮುಂಗಡವಾಗಿ 50 ಸಾವಿರ ರೂ. ಹಣವನ್ನು ಬಾನುಗೆ ಪಾವತಿಸಿದ್ದರು. ಆದರೆ, ಬಾನು ಈ ಹಣದಲ್ಲಿ ಪಾಶನಿಗೆ ಪಾಲು ನೀಡಿರಲಿಲ್ಲವಂತೆ. ಇದಕ್ಕಾಗಿ ಪಾಶ,  ಅಗಡಿ ಆಸ್ಪತ್ರೆ ಮುಂಭಾಗ ಬಾನು ಜೊತೆಗೆ ಜಗಳವಾಡುತ್ತಿದ್ದಾಗ ಆಕೆಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಾನು ನೀಡಿದ ಹೇಳಿಕೆ ಆಧಾರದ ಮೇಲೆ ಸಾವುದ್ ಮತ್ತು ಕೌಶರ್ ಅವರನ್ನು ಬಂಧಿಸಲಾಗಿದೆ. 38 ದಿನಗಳ ಗಂಡುಮಗುವನ್ನು ರಕ್ಷಿಸಿ ಆಕೆಯ ತಾಯಿ ಬಳಿಗೆ ಮತ್ತೆ ಸೇರಿಸಲಾಗಿದೆ. ಪಾಶನಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
 

SCROLL FOR NEXT