ರಾಜ್ಯ

ಕೊರೋನಾ ಮೂರನೇ ಅಲೆ ಮತ್ತು ಅಗತ್ಯ ತಯಾರಿ ಕುರಿತಂತೆ ಆರ್.ಅಶೋಕ್‌ ಹೇಳಿದ್ದೇನು?

Vishwanath S

ಬೆಂಗಳೂರು: ಕೋವಿಡ್ ಮೂರನೇ ಅಲೆ ಕಾಣಿಸಿಕೊಂಡಿದೆ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ 1500ಕ್ಕೂ ಹೆಚ್ಚು ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಕೋವಿಡ್ ಎಲ್ಲರಿಗೂ ಅದೆಷ್ಟು ತೊಂದರೆ ನೀಡಿದೆ ಎಂಬುದನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ. ಕೋವಿಡ್‌ನಿಂದ ಹಲವರು ಹಲವು ರೀತಿಯಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ನನ್ನ ಕ್ಷೇತ್ರದ ಎಲ್ಲಾ ವರ್ಗದ ಜನರಿಗೆ ಸಾಧ್ಯವಾದಷ್ಟು ನೆರವು ನೀಡಬೇಕೆಂದು ನಿರ್ಧರಿಸಿದ್ದೇನೆ. ಹೀಗಾಗಿ ಅವರ ಸಂಕಷ್ಟದಲ್ಲಿ ನಾನು ಪಾಲುದಾರ. ಅವರ ನೆರವಿಗೆ ನಾನು ಸದಾ ಸಿದ್ಧ" ಎಂದು ಹೇಳಿದರು.

ಕೋವಿಡ್ ಬಗ್ಗೆ ತುಂಬಾ ನಿರ್ಲಕ್ಷ್ಯ ಬೇಡ. ಎಲ್ಲರೂ ಜಾಗರೂಕರಾಗಿರಬೇಕಿದೆ. ಹಲವು ವರ್ಗದ ಜನರು ಕೋವಿಡ್ ನಿಂದ ತತ್ತರಿಸಿದ್ದಾರೆ. ಹೀಗಾಗಿ ಪೌರಕಾರ್ಮಿಕರು, ಅರ್ಚಕರು, ಸವಿತಾ ಸಮಾಜದವರು, ಆಟೋ ಡ್ರೈವರ್ ಗಳು, ಖಾಸಗಿ ಶಾಲಾ ಸಿಬ್ಬಂದಿ, ನ್ಯೂಸ್ ಪೇಪರ್, ಹಾಲು ಹಾಕುವವರು, ಬೀದಿ ಬದಿ ವ್ಯಾಪಾರಿಗಳು, ಮೆಕ್ಯಾನಿಕ್ ಗಳು, ಎಲೆಕ್ಟ್ರೀಷಿಯನ್ಸ್ ಹೀಗೆ ವಿವಿಧ ವರ್ಗದ ಜನರಿಗೆ ನೆರವು ನೀಡಲಾಗಿದೆ ಎಂದರು.

ಕೋವಿಡ್ ಹಾವಳಿ ತಾರಕ್ಕೇರಿದಾಗ ಹಲವರಿಗೆ ನಮ್ಮ ಕಡೆಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಕೂಡಾ ಮಾಡಲಾಯಿತು. ಕೋವಿಡ್ ನಿಂದ ಮೃತರಾದ 1200ಕ್ಕೂ ಅಧಿಕ ಜನರ ಅಸ್ಥಿ ವಿಸರ್ಜನೆ ಮಾಡಿದೆ. ಈ ಎಲ್ಲಾ ಕಾರ್ಯಗಳನ್ನ ಮಾಡಿದ್ದೇ ಸರ್ಕಾರ ಸದಾ ನಿಮ್ಮ ಜೊತೆಗೆ ನಿಲ್ಲುತ್ತದೆ. ನಾವೆಲ್ಲಾ ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತೇವೆ ಎಂಬ ಆತ್ಮವಿಶ್ವಾಸ ತುಂಬುವುದಾಗಿದೆ ಅಶೋಕ್ ಹೇಳಿದರು.

ಪದ್ಮನಾಭನಗರ ಕ್ಷೇತ್ರದಲ್ಲಿ ಮಕ್ಕಳಿಗಾಗಿಯೇ ಸುಸಜ್ಜಿತ ಎರಡು ಕೋವಿಡ್ ಆರೈಕೆ ಕೇಂದ್ರಗಳನ್ನ ಸಿದ್ಧಪಡಿಸಲಾಗಿದೆ. ಅಲ್ಲಿ ಮಕ್ಕಳ ಜೊತೆಗೆ ಪಾಲಕರು ಉಳಿದುಕೊಳ್ಳಲು ಕೂಡಾ ವ್ಯವಸ್ಥೆ ಮಾಡೆಲಾಗಿದೆ. ಈ ಆಸ್ಪತ್ರೆಗಳಲ್ಲಿ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ನಿರಂತರವಾಗಿ ನಿತ್ಯ ಸಾವಿರಾರು ಜನರಿಗೆ ಆಹಾರ ವಿತರಣೆ ಕೆಲಸ ಆಗುತ್ತಿದೆ. ಜನ ಭರವಸೆ ಕಳೆದುಕೊಳ್ಳುವುದು ಬೇಡ.ಜನತೆಯ ಜೊತೆಗೆ ಸದಾ ಸ್ಪಂದಿಸುವುದಾಗಿ ಪುನರುಚ್ಛರಿಸಿದರು.

SCROLL FOR NEXT