ರಾಜ್ಯ

ಕೊರೋನಾ 3ನೇ ಅಲೆಗೆ ಸಿದ್ಧತೆ: ಮಾನವ ಸಂಪನ್ಮೂಲ ಹೆಚ್ಚಿಸುವಂತೆ ಸರ್ಕಾರಕ್ಕೆ ಆಸ್ಪತ್ರೆಗಳ ಮನವಿ

Manjula VN

ಬೆಂಗಳೂರು: ರಾಜ್ಯದಲ್ಲಿ ಸಂಭಾವ್ಯ ಕೊರೋನಾ ಮೂರನೇ ಅಲೆ ಎದುರಿಸಲು ಸಜ್ಜಾಗುತ್ತಿರುವ ಸಾರ್ವಜನಿಕ ಆಸ್ಪತ್ರೆಗಳು, ಇದಕ್ಕಾಗಿ ಆಸ್ಪತ್ರೆಗಳಲ್ಲಿ ಮಾನವಶಕ್ತಿ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ. 

ಆಸ್ಪತ್ರೆಗಳಿಗೆ ಈಗಾಗಲೇ ಎರಡು ಅಲೆಗಳ ಅನುಭವಗಳಾಗಿದ್ದು, ಇದರ ಆಧಾರದ ಮೇಲೆ ಕೆಲವು ಆಸ್ಪತ್ರೆಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದಾರೆ. ಜಯನಗರ ಜನರಲ್ ಆಸ್ಪತ್ರೆಗೆ 30 ಮಂದಿ ಇನ್‍ಟೆನ್ಸಿವಿಸ್ಟ್, ಫಿಜಿಶಿಯನ್, ಅರಿವಳಿಕೆ ತಜ್ಞರ ಅಗತ್ಯವಿದೆ. ಇನ್ನು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಸ್ತುತ ಇಬ್ಬರು ಫಿಜಿಶಿಯನ್ ಮತ್ತು ಒಬ್ಬ ಅರಿವಳಿಕೆ ತಜ್ಞರಿದ್ದು, ಇನ್ನೂ ಐವರು ಫಿಜಿಶಿಯನ್, ಅರಿವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರ ಅಗತ್ಯವಿದೆ ಎಂದು ತಿಳಿದುಬಂದಿದೆ. 

ಕೊರೋನಾ ಎರಡನೇ ಅಲೆ ತೀವ್ರತೆ ಕಡಿಮೆಯಾದ ಹಿನ್ನೆಲೆಯಲ್ಲಿ ಅನೇಕ ಆಸ್ಪತ್ರೆಗಳು ಸಿಬ್ಬಂದಿಗಳ ಸಂಖ್ಯೆಯನ್ನು ಇಳಿಸಿಕೊಂಡಿತ್ತು. ಆದರೆ, ಮೂರನೇ ಅಲೆ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೆ ಸಿಬ್ಬಂದಿಗಳ ನೇಮಕಾತಿಯನ್ನು ಆರಂಭಿಸಲು ಮುಂದಾಗಿವೆ ಎಂದು ವರದಿಗಳು ತಿಳಿಸಿವೆ. 

ಕೊರೋನಾ ಎರಡನೇ ಅಲೆ ಮರೆಯಲಾಗದ್ದು, ಸಾಕಷ್ಟು ಆಸ್ಪತ್ರೆಗಳು ಸಂಕಷ್ಟಕ್ಕೆ ಸಿಲುಕಿದ್ದವು ಎಂದು 10ಕ್ಕೂ ಹೆಚ್ಚು ಸಿಬ್ಬಂದಿಗಳ ಆಗತ್ಯವಿರುವ ಸಿವಿ ರಾಮನ್ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ. 

ಮಾನವಶಕ್ತಿ ಜೊತೆಗೆ ಆಸ್ಪತ್ರೆ ಇದೀಗ ಮತ್ತೊಂದು ಸಮಸ್ಯೆಯನ್ನೂ ಎದುರಿಸುತ್ತಿದೆ. ಒಂದು ವರ್ಷದ ವೈದ್ಯಕೀಯ ಸೇವೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕಾಗಿರುವುದರಿಂದ ಸಾಕಷ್ಟು ಎಂಬಿಬಿಎಸ್ ವಿದ್ಯಾರ್ಥಿಗಳು ರಜೆ ಪಡೆದುಕೊಂಡು ಪಿಜಿ ಪರೀಕ್ಷೆಗಳನ್ನು ಬರೆಯಲು ಹೋಗಿದ್ದಾರೆ. ಎಂಬಿಬಿಎಸ್ ಪ್ರಮಾಣಪತ್ರವಿಲ್ಲದೆ ಪಿಜಿ ಸೀಟು ಪಡೆಯುವುದು (ಸೇವೆ ಪೂರ್ಣಗೊಳಿಸಿದ ನಂತರ ನೀಡಲಾಗುತ್ತದೆ) ಸಮಸ್ಯೆಯಾಗಿದೆ. ಸೇವೆಯನ್ನು ನಂತರ ಪೂರ್ಣಗೊಳಿಸುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಅದರ ಅಗತ್ಯತೆ ಪ್ರಸ್ತುತ ಹೆಚ್ಚಾಗಿದೆ. ಈ ಕುರಿತು ಸರ್ಕಾರ ಮಾರ್ಗಸೂಚಿ ಹೊರಡಿಸುವ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. 

ಬೌರಿಂಗ್ ಆಸ್ಪತ್ರೆಯ ವೈದ್ಯರು ಮಾತನಾಡಿ, ಚರಕ ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವೈದ್ಯರಿಗೆ ಆಹ್ವಾನ ನೀಡಿದಾಗ, ಅತ್ಯಂತ ಕಡಿಮೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗುತ್ತಿಗೆಯ ಅವಧಿ ಕಡಿಮೆಯಾಗಿರುವುದು ಹಾಗೂ ವೇತನ ಕಡಿಮೆ, ಕೋವಿಡ್ ಸೋಂಕಿನ ಭಯದಿಂದ ಹೆಚ್ಚು ಮಂದಿ ಮುಂದಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ. 

ಕೋವಿಡ್ ರೋಗಿಗಳು ಕೊರೋನಾ ಸೋಂಕು ಅಷ್ಟೇ ಅಲ್ಲದೆ, ಇತರೆ ಸಮಸ್ಯೆಗಳಿಂದಲೂ ಬಳಲುತ್ತಿರುತ್ತಾರೆ. ಡಯಾಲಿಸಿಸ್ ಅಗತ್ಯವಿರುವ ಸೋಂಕು ಪೀಡಿತ ರೋಗಿಗಳಿಗೆ ಇನ್‌ಸ್ಟಿಟ್ಯೂಟ್ ಆಫ್ ನೆಫ್ರೋ ಯೂರೋಲಾಜಿಯಲ್ಲಿ 50 ಹಾಸಿಗೆಗಳು, ನಿಮ್ಹಾನ್ಸ್‌ನಲ್ಲಿ 50 ಹಾಸಿಗೆಗಳು ಮತ್ತು ಸೋಂಕು ಪೀಡಿತ ಹೃದಯ ರೋಗಿಗಳಿಗೆ ಜಯದೇವ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಅಗತ್ಯವಿದೆ. ಜನರಲ್ ಆಸ್ಪತ್ರೆಗಳಲ್ಲಿ ತಜ್ಞರ ವೈದ್ಯರ ಕೊರತೆಗಳಿದ್ದು, ತಜ್ಞರ ವೈದ್ಯರ ನೇಮಕಾತಿ ಅಗತ್ಯವಿದೆ ಎಂದು ಜಯನಗರ ಜನರಲ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯೆ ಪಡೆದುಕೊಳ್ಳಲು ಆರೋಗ್ಯ ಸಚಿವ ಸುಧಾಕರ್ ಹಾಗೂ ಆರೋಗ್ಯ ಆಯುಕ್ತ ಕೆ.ವಿ.ತ್ರಿಲೋಕ್ ಚಂದ್ರ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದ್ದು, ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಟಿಎನ್ಐಇ ವರದಿ ಮಾಡಿದೆ. 

SCROLL FOR NEXT