ರಾಜ್ಯ

ಕೇರಳದಿಂದ ಬರುವವರಿಗೆ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್: ಆರೋಗ್ಯ ಸಚಿವ ಸುಧಾಕರ್

Srinivasamurthy VN

ಬೆಂಗಳೂರು: ಕೇರಳದಿಂದ ರಾಜ್ಯಕ್ಕೆ ಬರುವ ಎಲ್ಲರಿಗೂ ಒಂದು ವಾರಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದರು.

ಕೇರಳದಲ್ಲಿ ಕೋವಿಡ್‌ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯಗೊಳಿಸಲಾಗಿದೆ ಎಂದು ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಸಿಕಾ ಅಭಿಯಾನ ಭರದಿಂದ ಸಾಗಿದ್ದು, ರಾಜ್ಯದಲ್ಲಿ ಶೇ.100 ಸಿಂಗಲ್ ಡೋಸ್ ಲಸಿಕೆ ಪೂರ್ಣಗೊಳಿಸಿದ ಜಿಲ್ಲೆ ಎಂಬ ಕೀರ್ತಿಗೆ ಬೆಂಗಳೂರು ಪಾತ್ರವಾಗಿದೆ. ಇದೇ ಹುಮ್ಮಸ್ಸಿನಲ್ಲಿ ಇತರೆ ಜಿಲ್ಲೆಗಳಲ್ಲೂ ಲಸಿಕೆ ನೀಡಿಕೆ ಅಭಿಯಾನವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶವಿದೆ ಎಂದು ಹೇಳಿದರು.

ಲಸಿಕಾ ಉತ್ಸವದಲ್ಲಿ 10 ಲಕ್ಷ ಮಂದಿಗೆ ಲಸಿಕೆ, ತಿಂಗಳಲ್ಲಿ 2 ಕೋಟಿ ಮಂದಿಗೆ ಲಸಿಕೆ ಗುರಿ
ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರತೀ ವಾರದ ಒಂದು ದಿನ ವಿಶೇಷ ಲಸಿಕಾ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಕನಿಷ್ಠ10 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು. 

ಸಿ.ಎಂ ಮತ್ತು ನಾನು ಕೇಂದ್ರ ಮಟ್ಟದಲ್ಲಿ ಚರ್ಚಿಸಿದ ಬಳಿಕ ಸಮರ್ಪಕವಾಗಿ ಲಸಿಕೆ ಪೂರೈಕೆ ಆಗುತ್ತಿದೆ. ಆಗಸ್ಟ್ ತಿಂಗಳಲ್ಲಿಯೇ ಕೇಂದ್ರ ಸರ್ಕಾರದಿಂದ 1.10 ಕೋಟಿ ಲಸಿಕೆ ಬಂದಿದೆ. ಪ್ರತಿ ದಿನ 5 ಲಕ್ಷ ಲಸಿಕೆ ನೀಡಲಾಗುವುದು. ಬುಧವಾರ ಲಸಿಕಾ ಉತ್ಸವದಲ್ಲಿ 10 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಈ ಗುರಿಯ ಮೂಲಕ ಒಂದು ತಿಂಗಳಲ್ಲಿ ಒಂದೂವರೆಯಿಂದ ಎರಡು ಕೋಟಿ ಜನರಿಗೆ ಲಸಿಕೆ ನೀಡಬಹುದು ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಡೋಸ್ ಲಸಿಕೆ
‘ಇಡೀ ರಾಜ್ಯದಲ್ಲಿ 4 ಕೋಟಿ ಡೋಸ್ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಡೋಸ್ ನೀಡಲಾಗಿದೆ. ಬೀದರ್, ಯಾದಗಿರಿ, ರಾಯಚೂರು, ಕಲಬುರ್ಗಿ ಜಿಲ್ಲೆಗಳಲ್ಲಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಕೊಳೆಗೇರಿ ನಿವಾಸಿಗಳಿಗೆ ಪ್ರತಿದಿನ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೊದಲಾದ ಗಡಿಭಾಗದ ಜಿಲ್ಲೆಗಳಲ್ಲಿ ಗಡಿಯಿಂದ 20 ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಆದ್ಯತೆಯಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಿದರು.

ಶೇ 20ರಷ್ಟು ಮಂದಿಗೆ 2ನೇ ಡೋಸ್ ಲಸಿಕೆ
ಇದೇ ವೇಳೆ ಇಡೀ ರಾಜ್ಯದಲ್ಲಿ ಶೇ 20ರಷ್ಟು ಮಂದಿಗೆ 2ನೇ ಡೋಸ್ ಲಸಿಕೆ ನೀಡಲಾಗಿದ್ದು, ಬೆಂಗಳೂರಿನಲ್ಲಿ ಶೇ 27ರಷ್ಟು ಜನರಿಗೆ  ಮಾತ್ರ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇಡೀ ದೇಶದಲ್ಲಿ ಲಸಿಕೆ ಕಾರ್ಯ ಪೂರ್ಣಗೊಂಡ ನಗರ ಬೆಂಗಳೂರು ಆಗಬೇಕೆಂಬ ಗುರಿ ಇದೆ. ಮೊದಲ ಡೋಸ್ ಪಡೆದಾಗ ನೀಡಿದ ಮೊಬೈಲ್‌ ಸಂಖ್ಯೆಯನ್ನೇ ಎರಡನೇ ಡೋಸ್‌ಗೂ ನೀಡಬೇಕು. ಇಲ್ಲದಿದ್ದರೆ ಲಸಿಕೆ ಪಡೆದವರ ಪ್ರಮಾಣದ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುವುದಿಲ್ಲ ಎಂದು ಸುಧಾಕರ್‌ ಹೇಳಿದರು.

‘ಕೋವಿಡ್‌ ಸಂಭವನೀಯ ಮೂರನೇ ಅಲೆ ವಿರುದ್ಧ ಹೋರಾಡುವ ಕುರಿತು ಖಾಸಗಿ ಆಸ್ಪತ್ರೆಗಳ ಮತ್ತು ನರ್ಸಿಂಗ್‌ ಹೋಮ್‌ಗಳ ಅಸೋಸಿಯೇಷನ್‌ (ಫನಾ) ವರದಿ ನೀಡಿದೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ಜೊತೆಗೆ ಚರ್ಚಿಸಲಾಗುವುದು ಎಂದರು.

SCROLL FOR NEXT