ರಾಜ್ಯ

ಓಮಿಕ್ರಾನ್ ಭೀತಿ: ಬೆಳಗಾವಿಯಲ್ಲಿ ಅಧಿವೇಶನ ರದ್ದುಪಡಿಸುವಂತೆ ಸ್ಪೀಕರ್ ಗೆ ಸಚಿವಾಲಯ ನೌಕರರ ಸಂಘ ಮನವಿ

Lingaraj Badiger

ಬೆಂಗಳೂರು: ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ವಿಧಾನ ಮಂಡಲ ಅಧಿವೇಶವನ್ನು ಕೊರೋನಾ ವೈರಸ್‌ನ ಹೊಸ ಪ್ರಭೇದ ಓಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ರದ್ದುಪಡಿಸುವಂತೆ ಸಚಿವಾಲಯ ನೌಕರರ ಸಂಘ ಮನವಿ ಮಾಡಿದೆ.

ಈ ಸಂಬಂಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪತ್ರ ಬರೆದಿರುವ ನೌಕರರ ಸಂಘ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇದೇ ಡಿಸೆಂಬರ್ 13 ರಿಂದ ವಿಧಾನ ಮಂಡಲದ ಅಧಿವೇಶವನ್ನು ನಡೆಸಲು ಉದ್ದೇಶಿಸಿರುವುದು ಸ್ವಾಗತಾರ್ಹವಾದರೂ ಕೊರೋನಾ ವೈರಸ್‌ನ ಹೊಸ ಪ್ರಭೇದ ಓಮಿಕ್ರಾನ್ ಹರಡುವ ಭೀತಿ ವಿಶ್ವದಾದ್ಯಂತ ಆವರಿಸುತ್ತಿದೆ.

ವೈರಸ್ ಕಡಿವಾಣ ಹಾಕುವ ನಿಟ್ಟಿನಲ್ಲಿ ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ ಸಭೆಯಲ್ಲಿ ತಜ್ಞರು ಓಮಿಕ್ರಾನ್ ವೈರಸ್ ಸಂಬಂಧ ರಾಜ್ಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಎಚ್ಚರಿಕೆ ವಹಿಸುವಂತೆ ಹಾಗೂ ಈ ಸಂಬಂಧ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಜಾರಿಗೊಳಿಸುವಂತೆ ಶಿಫಾರಸ್ಸು ಮಾಡಿದ್ದಾರೆ.

ಪ್ರಸ್ತುತ ಬೆಳಗಾವಿಯು ಗಡಿ ಭಾಗದ ಜಿಲ್ಲೆಯಾಗಿದ್ದು, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಕ್ಕೆ ಹೊಂದಿಕೊಂಡಿವುದರಿಂದ ಅಂತರ್ ರಾಜ್ಯ ಹಾಗೂ ವಿದೇಶದಿಂದ ಆಗಮಿಸುವವರ ಸಂಚಾರ ಹೆಚ್ಚಾಗಿರುವ ಜಿಲ್ಲೆಯೂ ಆಗಿರುವುದರಿಂದ ಅಧಿವೇಶನದ ಕಾರಣದಿಂದ ಸಾವಿರಾರು ಜನ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು, ರಾಜಕಾರಣಿಗಳು ಒಂದೇ ಕಡೇ ಸೇರುವುದರಿಂದ ಓಮಿಕ್ರಾನ್  ವೈರಸ್ ಹರಡುವ ಭೀತಿ ಹೆಚ್ಚಾಗಿರುತ್ತದೆ. ಆದ್ದರಿಂದ, ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 13 ರಂದು ನಡೆಸಲು ಉದ್ದೇಶಿಸಿರುವ ವಿಧಾನ ಮಂಡಲ ಅಧಿವೇಶನವನ್ನು ರದ್ದುಗೊಳಿಸುವಂತೆ ಸಂಘದ ಅಧ್ಯಕ್ಷ ಗುರುಸ್ವಾಮಿ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

SCROLL FOR NEXT