ರಾಜ್ಯ

ಕೊಡಗು: ಒಂದೇ ಶಿಕ್ಷಣ ಸಂಸ್ಥೆಯ 11 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು

Srinivasamurthy VN

ಮಡಿಕೇರಿ: ರಾಜ್ಯದ ಒಂದೊಂದೇ ಶಿಕ್ಷಣ ಸಂಸ್ಥೆಗಳು ಕೋವಿಡ್ ಕ್ಲಸ್ಟರ್ ಪಟ್ಟಿಗೆ ಸೇರುತ್ತಿರುವುದು ಮುಂದುವರೆಯುತ್ತಿದ್ದು, ಮೈಸೂರು ಬೆನ್ನಲ್ಲೇ ಇದೀಗ ಕೊಡಗಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ 11 ವಿದ್ಯಾರ್ಥಿಗಳು ಕೋವಿಡ್ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ.

ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ (ಬಿವಿಬಿಕೆವಿ) ಒಟ್ಟು ಹನ್ನೊಂದು ವಿದ್ಯಾರ್ಥಿಗಳು ಕೋವಿಡ್-19 ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಸೋಂಕಿತ ವಿದ್ಯಾರ್ಥಿಗಳೆಲ್ಲರನ್ನೂ ಐಸೋಲೇಷನ್ ನಲ್ಲಿ ಇರಿಸಲಾಗಿದ್ದು, ಸೋಂಕಿತರೆ ವಿದ್ಯಾರ್ಥಿಗಳು ರೋಗ ಲಕ್ಷಣ ರಹಿತರಾಗಿದ್ದಾರೆ ಮತ್ತು ಅವರನ್ನು ಪ್ರತ್ಯೇಕಿಸಲಾಗಿದೆ ಎಂದು ಹೇಳಲಾಗಿದೆ.

ನವೆಂಬರ್ 27 ರಂದು, BVBKV ಸಂಸ್ಥೆಯ ಎಂಟನೇ ತರಗತಿಯ ವಿದ್ಯಾರ್ಥಿಗೆ COVID-19 ಪರೀಕ್ಷೆ ನಡೆಸಲಾಗಿತ್ತು, ಈ ವೇಳೆ ವಿದ್ಯಾರ್ಥಿ ಸೋಂಕಿಗೆ ತುತ್ತಾಗಿರುವುದು ಸ್ಪಷ್ಟವಾಗಿತ್ತು. ಇದಲ್ಲದೆ, ನವೆಂಬರ್ 29 ರಂದು ಅದೇ ತರಗತಿಯಿಂದ ಮತ್ತೊಬ್ಬ ವಿದ್ಯಾರ್ಥಿಯ ಪರೀಕ್ಷಾ ವರದಿ ಕೂಡ ಪಾಸಿಟಿವ್ ಎಂದು ಬಂದಿತ್ತು. ಇದರ ನಂತರ, ಸಂಸ್ಥೆಯ ಆಡಳಿತವು ಎಂಟನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು COVID-19 ಪರೀಕ್ಷೆಗೆ ಒಳಪಡಿಸಿತು. ಈ ಪರೀಕ್ಷಾ ಫಲಿತಾಂಶಗಳು ಶುಕ್ರವಾರ ಬಂದಿದ್ದು, ಈ ಹಿಂದೆ ಸೋಂಕಿಗೆ ತುತ್ತಾಗಿದ್ದ ವಿದ್ಯಾರ್ಥಿಗಳ ಅದೇ ತರಗತಿಯ ಇನ್ನೂ ಒಂಬತ್ತು ವಿದ್ಯಾರ್ಥಿಗಳ ವರದಿ ಪಾಸಿಟಿವ್ ಬಂದಿದೆ.

ಈ ಕುರಿತು ಮಾತನಾಡಿರುವ ಡಿಎಚ್‌ಒ ಡಾ.ವೆಂಕಟೇಶ್ ಅವರು, “ನಾನು, ಡಿಸಿ ಬಿ.ಸಿ.ಸತೀಶ ಮತ್ತು ಇತರ ಜಿಲ್ಲಾಡಳಿತದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದೆವು. 6 ರಿಂದ 10 ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವಂತೆ ನಾವು ಆಡಳಿತ ಮಂಡಳಿಗೆ ಆದೇಶಿಸಿದ್ದೇವೆ ಮತ್ತು ಅದೇ ರೀತಿ ಪರೀಕ್ಷೆಗಳು ಮುಂದುವರಿದಿದೆ. ಏತನ್ಮಧ್ಯೆ, ಸೋಂಕಿಗೆ ತುತ್ತಾದ ವಿದ್ಯಾರ್ಥಿಗಳು ಲಕ್ಷಣ ರಹಿತರಾಗಿದ್ದಾರೆ ಮತ್ತು ಅವರ ಮನೆಗಳಲ್ಲಿ ಅವರನ್ನು ಪ್ರತ್ಯೇಕಿಸಲಾಗಿದೆ ಎಂದು ಶಾಲೆಯ ಆಡಳಿತದ ಮೂಲಗಳು ದೃಢಪಡಿಸಿವೆ ಎಂದು ಹೇಳಿದರು.

ಅಂತೆಯೇ ವಾರದ ಹಿಂದೆ, ಮಡಿಕೇರಿಯ ಸೇಂಟ್ ಜೋಸೆಫ್ ಕಾನ್ವೆಂಟ್‌ನ ಇಬ್ಬರು ವಿದ್ಯಾರ್ಥಿಗಳು COVID-19 ಗೆ ತುತ್ತಾಗಿದ್ದರು. ಇದರ ನಂತರ, ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಇನ್ನು ಜಿಲ್ಲೆಯಲ್ಲಿ ಹೊಸ ಒಮಿಕ್ರಾನ್ ರೂಪಾಂತರದ ಯಾವುದೇ ಕ್ಲಿನಿಕಲ್ ಚಿಹ್ನೆಗಳು ಕಂಡುಬಂದಿಲ್ಲ ಮತ್ತು ಜಿನೋಮ್ ಅನುಕ್ರಮಕ್ಕಾಗಿ ಜಿಲ್ಲೆಯಿಂದ ಯಾವುದೇ ಮಾದರಿಗಳನ್ನು ಕಳುಹಿಸಲಾಗಿಲ್ಲ ಎಂದು ಡಿಎಚ್‌ಒ ಡಾ.ವೆಂಕಟೇಶ್ ಮಾಹಿತಿ ನೀಡಿದರು.
 

SCROLL FOR NEXT