ರಾಜ್ಯ

ಪ್ರಧಾನಿ ಆಗಮನ ಅನಿಶ್ಚಿತ: ವಿವಿಧ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ಮುಂದೂಡಿದ 'ಬೇಸ್'

Sumana Upadhyaya

ಬೆಂಗಳೂರು: ಕಳೆದ ಬಾರಿ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಅವರಿಂದ ಬೆಂಗಳೂರಿನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಆರ್ಥಿಕ ವಿಶ್ವವಿದ್ಯಾಲಯದ(Dr BR Ambedkar School of Economics University)(BASE) ಕೆಲವು ಯೋಜನೆಗಳ ಉದ್ಘಾಟನೆಗೆ ಬರಲು ಕೇಳಿಕೊಂಡಿದ್ದರು. ಅದಕ್ಕೆ ಪ್ರಧಾನಿಯವರಿಂದ ಒಪ್ಪಿಗೆಯನ್ನು ಸಹ ಪಡೆದಿದ್ದರು. 

ಆದರೆ ಇದೀಗ ಕೋವಿಡ್ ಮೂರನೇ ಅಲೆ ಹೆಚ್ಚಾಗುತ್ತಿದ್ದು, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಜೊತೆಗೆ ಪ್ರಧಾನಿಯವರು ಬೇರೆ ಕಾರ್ಯಕ್ರಮಗಳಲ್ಲಿಯೂ ನಿರತರಾಗಿದ್ದಾರೆ. ಬೆಂಗಳೂರಿನ ಡಾ ಬಿ ಆರ್ ಅಂಬೇಡ್ಕರ್ ಆರ್ಥಿಕ ವಿಶ್ವವಿದ್ಯಾಲಯಕ್ಕೆ ಇನ್ನೂ ಪ್ರಧಾನಿಯವರು ಬರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಇನ್ನು ಕೆಲ ವಾರಗಳ ಮಟ್ಟಿಗೆ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಿದೆ. 

ಉನ್ನತ ಶಿಕ್ಷಣ ಇಲಾಖೆಯ ಮೂಲಗಳಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಸದ್ಯ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇನ್ನು ದೆಹಲಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ನೀಡುವವರಿದ್ದಾರೆ, ಕೋವಿಡ್ ಮೂರನೇ ಅಲೆ ಓಮಿಕ್ರಾನ್ ವೈರಸ್ ಸೋಂಕು ಇತ್ಯಾದಿ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಸದ್ಯ ಬೆಂಗಳೂರಿಗೆ ಬರುವುದು ಸಂಶಯವಾಗಿದೆ. 

ಇನ್ನು ಪ್ರಧಾನಿ ಆಗಮಿಸುತ್ತಾರೆಂದು ವಿವಿಯ ಕ್ಯಾಂಪಸ್ ಒಳಗೆ ತರಾತುರಿಯಲ್ಲಿ ಕೆಲಸ ಮಾಡಿಸಿರುವ ಬಗ್ಗೆ ನೆಟ್ಟಿಗರು ಟ್ವೀಟ್ ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಟೀಕಿಸುತ್ತಿದ್ದಾರೆ. ಪ್ರಧಾನಿ ಬರುತ್ತಾರೆಂದು ವಿಶ್ವ ವಿದ್ಯಾಲಯಕ್ಕೆ ಹೋಗುವ ದಾರಿಗೆ ಡಾಂಬರು ಹಾಕಲಾಗಿದೆ. ಆದರೆ ಅಲ್ಲಿಗೆ ಜನರು ಬರಬೇಕೆಂದರೆ ದೊಡ್ಡ ಹೊಂಡವನ್ನು ದಾಟಿ ಬರಬೇಕು ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.

ಮತ್ತೊಬ್ಬರು ಪ್ರಧಾನಿ ಮೋದಿಯವರು ಬೆಂಗಳೂರಿಗೆ ಬಂದು ಒಮ್ಮೆ ಇಡೀ ಬೆಂಗಳೂರು ಸುತ್ತಾಡಿ ಇಲ್ಲಿನ ಹೊಂಡ-ಗುಂಡಿ ಬಿದ್ದಿರುವ ರಸ್ತೆಗಳ ಪಾಡನ್ನು ನೋಡಲಿ ಎಂದು ಕೇಳಿಕೊಂಡಿದ್ದಾರೆ.

SCROLL FOR NEXT