ರಾಜ್ಯ

ದೊಡ್ಡಬಳ್ಳಾಪುರ: ಪರಿವರ್ತಿತ ಗೂಡ್ಸ್ ರೈಲು, ಹಳಿಗಳಿಗೆ ಹಾನಿ, ರೈಲುಗಳ ವಿಳಂಬ ಸಾಧ್ಯತೆ

Srinivasamurthy VN

ಬೆಂಗಳೂರು: ವಾಹನಗಳನ್ನು ಸಾಗಿಸಲು ಪರಿವರ್ತಿತ ಖಾಲಿ ಗೂಡ್ಸ್ ರೈಲಿನ ಎರಡು ಬೋಗಿಗಳು ಭಾನುವಾರ ರಾತ್ರಿ ಬೆಂಗಳೂರು ರೈಲ್ವೆ ವಿಭಾಗದ ದೊಡ್ಡಬಳ್ಳಾಪುರ ಯಾರ್ಡ್‌ನಲ್ಲಿ ಕೆಲಸ ಮಾಡುವಾಗ ಹಳಿತಪ್ಪಿವೆ ಎಂದು ತಿಳಿದುಬಂದಿದೆ.

ಪರಿಣಾಮವಾಗಿ ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ನಡುವೆ ಚಲಿಸುವ ರೈಲುಗಳು 45 ನಿಮಿಷದಿಂದ ಎರಡು ಗಂಟೆಗಳವರೆಗೆ ವಿಳಂಬವಾಯಿತು. 26 ಬೋಗಿಗಳನ್ನು ಹೊಂದಿರುವ ಹೊಸದಾಗಿ ಮಾರ್ಪಡಿಸಿದ ಸರಕು ಸಾಗಾಣಿಕಾ (ಎನ್‌ಎಂಜಿ) ಯಾರ್ಡ್‌ನಿಂದ ಮುಖ್ಯ ಲೈನ್‌ಗೆ ಬದಲಿಸುವ ಕೆಲಸ ಮಾಡುತ್ತಿದ್ದಾಗ ರೈಲು ಹಳಿತಪ್ಪಿದೆ. ರೈಲಿನ 9 ಮತ್ತು 10ನೇ ಬೋಗಿಗಳ ಚಕ್ರಗಳು ಹಳಿ ತಪ್ಪಿದ್ದು, ಪರಿಣಾಮ ಹಳಿಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ತಿಳಿಸಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಅಧಿಕಾರಿಗಳು ರಾತ್ರಿಯಿಡೀ ಕಾರ್ಯಪ್ರವೃತ್ತರಾಗಿ ಹಳಿ ಪುನಶ್ಚೇತನ ಕಾರ್ಯ ನಡೆಸಿದರು. ಇದೀಗ ಎರಡು ಮಾರ್ಗಗಳ ಸಂಚಾರ ದುರಸ್ತಿ ಕಾರ್ಯಾಚರಣೆಯಿಂದಾಗಿ ಒಂದು ಮಾರ್ಗವಾಗಿದೆ. ಇದರಿಂದಾಗಿ ಎಲ್ಲಾ ರೈಲುಗಳ ವೇಗವನ್ನು ಕಡಿಮೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ಅವರು, ರಾತ್ರಿ 7.33 ರ ವೇಳೆಗೆ ರೈಲು ಹಳಿ ತಪ್ಪಿದೆ. ಎರಡು ಖಾಲಿ ಬೋಗಿಗಳು (9ನೇ ಮತ್ತು 10ನೇ) ಹಳಿತಪ್ಪಿದ್ದು, ಮುಖ್ಯ ಲೈನ್‌ನಿಂದ ಡೌನ್ ಲೈನ್ ಗೆ ಬೋಗಿ ಮಾರ್ಪಡಿಸುವಾಗ ರೈಲು ಹಳಿ ತಪ್ಪಿದೆ.  ಇದು ಹಳಿಗಳಿಗೆ ಹಾನಿಮಾಡಿವೆ. ರಾತ್ರಿಯಿಡೀ ಕೆಲಸ ಮಾಡಿದರೂ, ಅವುಗಳನ್ನು ಪುನಃಸ್ಥಾಪಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ದ್ವಿಚಕ್ರ ವಾಹನಗಳು, ಕಾರುಗಳು ಮತ್ತು ಟ್ರಾಕ್ಟರ್‌ಗಳನ್ನು ಸಾಗಿಸಲು NMG ಗಳನ್ನು ಬಳಸಲಾಗುತ್ತದೆ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಅವುಗಳ ಬಳಕೆಯು ಹೆಚ್ಚಾಗಿತ್ತು ಎಂದು ಮತ್ತೋರ್ವ ಅಧಿಕಾರಿ ಹೇಳಿದರು.

ರೈಲುಗಳ ವಿಳಂಬ
ಇನ್ನು ಈ ಮಾರ್ಗದಲ್ಲಿ ದುರಸ್ತಿ ಕಾರ್ಯ ನಡೆಸುತ್ತಿದ್ದರಿಂದ ಹಲವು ರೈಲುಗಳ ಸಂಚಾರದಲ್ಲಿ 45ರಿಂದ 2 ಗಂಟೆ ಸಮಯ ವಿಳಂಬವಾಯಿತು. ಪ್ರಮುಖವಾಗಿ ಯಶವಂತಪುರ-ಬೀದರ್ ಎಕ್ಸ್‌ಪ್ರೆಸ್ (ಸಂ.16571) 45 ನಿಮಿಷಗಳು, ಕೆಎಸ್‌ಆರ್ ಬೆಂಗಳೂರು-ಹೊಸದಿಲ್ಲಿ (ರೈಲು ಸಂಖ್ಯೆ. 12627) 90 ನಿಮಿಷಗಳು ಮತ್ತು ಕೆಎಸ್‌ಆರ್ ಬೆಂಗಳೂರು-ಹಜರತ್ ನಿಜಾಮುದಿನ್ (ಟ್ರೇನ್ ಸಂಖ್ಯೆ. 22691) 5 ನಿಮಿಷಗಳು. ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಕೊಯಮತ್ತೂರ್‌ಗೆ ಹೋಗುವ ಕುರ್ಲಾ ಎಕ್ಸ್‌ಪ್ರೆಸ್ (ಟ್ರೇನ್ ನಂ.11013) ಗೌರಿಬಿದನೂರಿನಲ್ಲಿ ಹಾಲ್ಚ್ ಆಗಿ ಒಂದು ಗಂಟೆ 45 ನಿಮಿಷ ತಡವಾಯಿತು ಎಂದು ತಿಳಿದುಬಂದಿದೆ. 

ಹೊಸ ಟ್ರ್ಯಾಕ್ ಅನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಬೇಕಾಗಿರುವುದರಿಂದ ಮತ್ತು ಅದರ ನಂತರ ಸುರಕ್ಷತಾ ಪರೀಕ್ಷೆಗಳನ್ನು ನಡೆಸಬೇಕಾಗಿರುವುದರಿಂದ ರೈಲುಗಳು ಕೇವಲ ಒಂದು ಮಾರ್ಗದಲ್ಲಿ ಮಾತ್ರ ಚಲಿಸುತ್ತವೆ. ಈ ಘಟನೆ ಕುರಿತು ತನಿಖೆ ಮುಂದುವರಿದಿದ್ದು, ಹಾನಿಯ ಪ್ರಮಾಣವನ್ನು ನಂತರ ಕಂಡುಹಿಡಿಯಲಾಗುವುದು ಎಂದು ಅನೀಶ್ ಹೆಗ್ಡೆ ಹೇಳಿದರು. 
 

SCROLL FOR NEXT