ರಾಜ್ಯ

ಬೆಂಗಳೂರು ಉಪ ನಗರ, ಗ್ರಾಮ ಪಂಚಾಯತ್ ಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ: ಸಿಎಂ ಬಸವರಾಜ ಬೊಮ್ಮಾಯಿ

Sumana Upadhyaya

ಬೆಂಗಳೂರು: ರಾಜಧಾನಿಯ ಹೊರವಲಯದ ಗ್ರಾಮಗಳು ಸೇರಿದಂತೆ ಸಂಪೂರ್ಣ ಬೆಂಗಳೂರು ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಬೆಂಗಳೂರು ಹೊರವಲಯದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಬರುವ ಕೈಗಾರಿಕೆಗಳಿಂದ ಸಂಗ್ರಹವಾಗುವ ತೆರಿಗೆಯನ್ನು ಈ ಗ್ರಾಮಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಬೆಂಗಳೂರು ಹೊರವಲಯದ ಗ್ರಾಮಗಳಲ್ಲಿನ ಅಭಿವೃದ್ಧಿಯಾಗದೆ ಬೆಂಗಳೂರು ನಗರದ ಸಂಪೂರ್ಣ ವಿಸ್ತಾರ ಅಭಿವೃದ್ಧಿ ಸಾಧ್ಯವಿಲ್ಲ, ಬೆಂಗಳೂರಿಗೆ ತಾಗಿಕೊಂಡಿರುವ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳನ್ನು ಮೊದಲು ಅಭಿವೃದ್ಧಿಪಡಿಸಬೇಕು, ನಂತರ ಬೆಂಗಳೂರಿನ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಅಭಿಪ್ರಾಯಪಟ್ಟರು. 

ಇದಕ್ಕೂ ಮೊದಲು ಬೀದರ್ ನಲ್ಲಿ ನಿನ್ನೆ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಗಳ ಅಭಿವೃದ್ಧಿ ಸರ್ಕಾರದ ಮುಖ್ಯ ಧ್ಯೇಯವಾಗಿದ್ದು, ಅದಕ್ಕೆ ಸರಿಯಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರ ಮನೆಬಾಗಿಲಿಗೆ ತೆಗೆದುಕೊಂಡು ಹೋಗಬೇಕು. ಅಗತ್ಯ ಸೇವೆಗಳಿಗೆ ಜನರು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಕಚೇರಿಗಳಿಗೆ ಹೋಗುವಂತಾಗಬಾರದು. ನಮ್ಮ ಸರ್ಕಾರದ ಆದ್ಯತೆ ಗ್ರಾಮಗಳ ಸಬಲೀಕರಣ ಮತ್ತು ಅಭಿವೃದ್ಧಿ ಎಂದರು. 

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿಗಳ ಕಾರ್ಯ ಯೋಜನೆಯನ್ನು ರೂಪಿಸಲಾಗುವುದು ಎಂದರು.

SCROLL FOR NEXT