ರಾಜ್ಯ

ಬೆಂಗಳೂರು: ಆಟೋ ನಂತರ, ಓಲಾ, ಉಬರ್ ಪ್ರಯಾಣ ದರ ಏರಿಕೆ ಬಿಸಿ

Lingaraj Badiger

ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹಾಗೂ ಆಟೋ ಪ್ರಯಾಣ ದರ ಏರಿಕೆಯಿಂದ ಸಂಕಷ್ಟಕ್ಕೆ ಈಡಾಗಿದ್ದ ನಾಗರಿಕರು ಇದೀಗ ಜನವರಿ ಒಂದರಿಂದ ಮತ್ತೊಂದು ಪ್ರಯಾಣ ದರದ ಬಿಸಿಯನ್ನು ಅನುಭವಿಸಬೇಕಾಗಿದೆ.

ಕೇಂದ್ರ ಸರ್ಕಾರವು ಶೇ.5  ರಷ್ಟು ಜಿಎಸ್‍ಟಿಯನ್ನು ವಿಧಿಸಿದ ನಂತರ ಓಲಾ, ಉಬರ್ ಅಥವಾ ಇತರ ರೈಡ್-ಹೇಲಿಂಗ್ ಅಪ್ಲಿಕೇಶನ್‍ಗಳಿಂದ ಬುಕ್ ಮಾಡಲಾದ ಆಟೋ-ರಿಕ್ಷಾಗಳ ಪ್ರಯಾಣದ ದರವೂ ದುಬಾರಿಯಾಗಲಿವೆ.

ಹೇಲಿಂಗ್ ಅಪ್ಲಿಕೇಶನ್‍ಗಳ ಹೊರಗೆ ಕಾರ್ಯನಿರ್ವಹಿಸುವ ಆಟೋ-ರಿಕ್ಷಾಗಳು ಜಿಎಸ್‍ಟಿ ವ್ಯಾಪ್ತಿಯಲ್ಲಿ ಬರುವುದಿಲ್ಲ, ಬೆಂಗಳೂರು ಸಾರಿಗೆ ಪ್ರಾಧಿಕಾರವು ನಗರದಲ್ಲಿ ಆಟೋ ದರಗಳನ್ನು ಶೇ. 15 ರಿಂದ 20ರಷ್ಟು ಹೆಚ್ಚಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆಯಾಗಿದೆ.

ಶೇ.50 ರಷ್ಟು ಪ್ರಯಾಣಿಕರು ಓಲಾ ಮತ್ತು ಉಬರ್ ಮೂಲಕವೇ ಪ್ರಯಾಣ ಕೈಗೊಳ್ಳುತ್ತಾರೆ ಎಂದು ಆಟೋ ರಿಕ್ಷಾ ಚಾಲಕರ ಸಂಘ ಪೀಸ್ ಆಟೋ ಹೇಳಿದೆ. ಕೋವಿಡ್‍ನಿಂದಾಗಿ ಆದಾಯವೂ ಇಲ್ಲದೇ ಆರ್ಥಿಕವಾಗಿ ನಷ್ಟ ಸಂಭವಿಸಿದೆ ಮತ್ತು ಈಗ ಸರ್ಕಾರವು ನಮ್ಮ ಗಳಿಕೆಯಿಂದ ಶೇ.5ರಷ್ಟು ಆದಾಯವನ್ನು ಜಿಎಸ್‍ಟಿ ಮೂಲಕ ಕಿತ್ತುಕೊಳ್ಳುತ್ತಿದೆ. ಇದು ದುರದೃಷ್ಟಕರ. ತೆರಿಗೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ಚಾಲಕರ ಪ್ರತಿನಿಧಿ ರಘು ಎನ್, ತಿಳಿಸಿದ್ದಾರೆ.

ಐದು ಪ್ರತಿಶತ ಸರಕು ಮತ್ತು ಸೇವಾ ತೆರಿಗೆಯನ್ನು(ಜಿಎಸ್‍ಟಿ) ಆಟೋ ರಿಕ್ಷಾಗಳಿಗೆ ವಿಸ್ತರಿಸುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ ಉಬರ್ ಕಂಪೆನಿ, ಈ ಬಗ್ಗೆ ಪುನಃ ಮರುಪರಿಶೀಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ.

“ಭಾರತದಾದ್ಯಂತ ಲಕ್ಷಗಟ್ಟಲೆ ಆಟೋ ಚಾಲಕರು ಜೀವನೋಪಾಯಕ್ಕಾಗಿ ಉಬರ್ ಮತ್ತು ಇತರ ಅಪ್ಲಿಕೇಶನ್‍ಗಳನ್ನು ಅವಲಂಬಿಸಿದ್ದಾರೆ. ಮಹಿಳೆಯರು ಮತ್ತು ಹಿರಿಯ ನಾಗರಿಕರು ತಮ್ಮ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಓಲಾ, ಉಬರ್ ಮೂಲಕವೇ ಪ್ರಯಾಣಿಸುತ್ತಾರೆ. ಹಾಗಾಗಿ ಕಡಿಮೆ ದರವಿರುವ ವಾಹನಗಳನ್ನೇ ತಮ್ಮ ಪ್ರಯಾಣಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ತೆರಿಗೆಯು ಪ್ಲಾಟ್‍ಫಾರ್ಮ್ ದರಗಳಲ್ಲಿ ಏರಿಕೆಗೆ ಮತ್ತು ಬೇಡಿಕೆಗೆ ಅನುಗುಣವಾದ ಕುಸಿತಕ್ಕೆ ಕಾರಣವಾಗುತ್ತದೆ ಎಂದು ವಕ್ತಾರರು ಹೇಳಿದ್ದಾರೆ.

SCROLL FOR NEXT