ರಾಜ್ಯ

ಭೈರತಿ ಬಸವರಾಜ್ ರಾಜಿನಾಮೆಗೆ ಕಾಂಗ್ರೆಸ್‌ ಪಟ್ಟು; ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ

Lingaraj Badiger

ಬೆಳಗಾವಿ: ನಗರಾಭಿವೃದ್ಧಿ ಸಚಿವರಾಗಿರುವ ಭೈರತಿ ಬಸವರಾಜ್ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಭೈರತಿ ಬಸವರಾಜ್ ರಾಜೀನಾಮೆಗೆ ಒತ್ತಾಯಿಸಿ ನಿಯಮ 60ರಡಿ ಚರ್ಚೆಗೆ ಆಗ್ರಹ ಮಾಡಿದರು. ಆದರೆ, ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಚರ್ಚೆಗೆ ಅವಕಾಶ ನೀಡಲು ಬರುವುದಿಲ್ಲ ಎಂದು ಸಭಾಧ್ಯಕ್ಷ ಕಾಗೇರಿ ಪ್ರಕಟಿಸಿದರು.

ಈ ವೇಳೆ ಸಿದ್ದರಾಮಯ್ಯ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಆಗಿನ ವಿರೋಧ ಪಕ್ಷದ ಸ್ಧಾನದಲ್ಲಿದ್ದ ಬಿಜೆಪಿ ಸದಸ್ಯರು ನಿಯಮ 60ರಡಿ ಪ್ರಸ್ತಾಪ ಮಾಡಿದ್ದರು. ಆಗ ಸಭಾಧ್ಯಕ್ಷರಾಗಿದ್ದ ಕೋಳಿವಾಡ ಅವರು ನಿಯಮ 69ರಡಿ ಪರಿವರ್ತನೆ ಮಾಡಿ, ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದರು ಎಂದು ನೆನಪಿಸಿದರು.

ಆದರೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕಾನೂನು ಸಚಿವ ಮಾಧುಸ್ವಾಮಿ, ಭೈರತಿ ಬಸವರಾಜ್ ಅವರ ಮೇಲಿನ ಪ್ರಕರಣ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಸದನದ ನಿಯಮಾವಳಿಗಳ ಪ್ರಕಾರ ಚರ್ಚೆಗೆ ಅವಕಾಶ ನೀಡಲು ಬರುವುದಿಲ್ಲ ಎಂದು ಮನವರಿಕೆ ಮಾಡಿದರು. ಅಲ್ಲದೆ, ನಿಯಮ 62(7)ರ ನಿಲುವಳಿ ಸೂಚನೆಯ ಪ್ರಕಾರ, ಭಾರತದ ಯಾವುದೇ ಭಾಗದಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿರುವ ಯಾವುದೇ ವಿಷಯಕ್ಕೆ ಸಂಬಂಧಿಸಿರಿತಕ್ಕದ್ದಲ್ಲ ಎಂದು ಸಭಾಧ್ಯಕ್ಷ ಕಾಗೇರಿ, ಕಾಂಗ್ರೆಸ್ ಸದಸ್ಯರಿಗೆ ನಿಯಮಾವಳಿ ಪುಸ್ತಕವನ್ನು ಓದಿ ಹೇಳಿದರು.

ಜಾರ್ಜ್ ರಾಜೀನಾಮೆ ಕೊಟ್ಟಿದ್ದರೂ... ಆದ್ರೆ ಭೈರತಿ ಏಕಿಲ್ಲ? ಎಂದು ಚರ್ಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದರು. ಗಣಪತಿ ಆತ್ಮಹತ್ಯೆ ಪ್ರಕರಣ ಕೋರ್ಟ್ ನ ಸೆಕ್ಷನ್ 200ರಡಿ ಇತ್ತು. ಆಗಿನ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಆದೇಶ ಬಂತು. ತಕ್ಷಣ ಕೆ.ಜೆ.ಜಾರ್ಜ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ, ಸಿಬಿಐ ತನಿಖೆ ನಡೆದು ಕೆ.ಜೆ.ಜಾರ್ಜ್ ಪಾತ್ರ ಏನು ಇಲ್ಲ ಎಂದು ಗೊತ್ತಾದ ಮೇಲೆ ಜಾರ್ಜ್ ಮತ್ತೆ ಮಂತ್ರಿಯಾದರು. ಅದೇ ರೀತಿ ಭೈರತಿ ಬಸವರಾಜ್ ಕೂಡ ಈಗ ರಾಜೀನಾಮೆ ನೀಡಲಿ, ತನಿಖೆಯಲ್ಲಿ ನಿರಪರಾಧಿ ಎಂದು ಬಂದ್ರೆ ಮತ್ತೆ ಸಚಿವ ಸ್ಥಾನ ಪಡೆದುಕೊಳ್ಳಲಿ. ಇದು ಸಬ್ ಜ್ಯುಡಿಸರಿ ಕೇಸ್ ಅಲ್ಲ. ಹೀಗಾಗಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.

ಎಫ್ಐಆರ್, ಚಾರ್ಜ್ ಶೀಟ್ ಆದ್ರೂ ಈ ಹಿಂದೆ ಮಂತ್ರಿ ಸ್ಥಾನ ಇಟ್ಟುಕೊಂಡಿದ್ದಾರೆ. ನಿಯಮ 60(2)ರಡಿಯಲ್ಲಿ ಯಾವುದೇ ಕೇಸ್ ಕೋರ್ಟ್ ನಲ್ಲಿರುವಾಗ ಚರ್ಚೆಗೆ ಅವಕಾಶ ನೀಡಬಾರದು. ನೈತಿಕತೆ ಪ್ರಶ್ನೆ ಹಾಗೂ ರೂಲ್ಸ್, ಕಾನೂನು, ಕೋರ್ಟ್ ಏನು ಹೇಳಿದೆ ಅನ್ನೋ ಆಧಾರದ ಮೇಲೆ ಹೋಗಬೇಕಿದೆ. ಕೋರ್ಟಿನಲ್ಲಿರುವ ವಿಚಾರವನ್ನು ಸದನದಲ್ಲಿ ಚರ್ಚೆ ಮಾಡಿದ್ರೆ ನ್ಯಾಯಾಲಯದ ಮೇಲೆ ಪ್ರಭಾವ ಬೀರಿದಂತಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಮಾಧುಸ್ವಾಮಿ, ಕಾಂಗ್ರೆಸ್ ಸದಸ್ಯರಿಗೆ ತಿಳಿಸಿದರು.

ಈ ವೇಳೆ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದ ಕೃಷ್ಣ ಬೈರೇಗೌಡ, “ಡಿ.ಕೆ.ರವಿ ಹಾಗೂ ಗಣಪತಿ ವಿಚಾರದಲ್ಲಿ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿತ್ತು. ಎಫ್ ಐ ಆರ್ ದಾಖಲಾಗಿರಲಿಲ್ಲ. ಆದರೆ, ಭೈರತಿ ಬಸವರಾಜ್ ವಿಚಾರದಲ್ಲಿ ಕೋರ್ಟ್ ನಿರ್ದೇಶನದ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ” ಎಂದು ಹೇಳಿದರು.

ಯಾರದೋ ಪಾಪದ ಕೂಸಿಗೆ ನಿವ್ಯಾಕೆ ತಂದೆ ಆಗ್ತೀರಾ?
ಈ ವೇಳೆ ಆಕ್ರೋಶಭರಿತರಾದ ಸಿದ್ದರಾಮಯ್ಯ, ಎದ್ದು ನಿಂತಿದ್ದ ಮಾಧುಸ್ವಾಮಿಯತ್ತ ಕೈ ಮಾಡುತ್ತಾ ಯಾರದೋ ಪಾಪದ ಕೂಸಿಗೆ ನೀವ್ಯಾಕೆ ತಂದೆ ಆಗ್ತೀರಾ? ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದರು. ಆದರೆ, ಮಾಧುಸ್ವಾಮಿ ಮಾತ್ರ ಎಫ್ಐಆರ್ ದಾಖಲಾಗಿದ್ದು, ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಚರ್ಚೆಗೆ ಅವಕಾಶ ಕೊಡಬಾರದು ಎಂದು ಹೇಳಿದರು.

ಚರ್ಚೆಯನ್ನು ತಿರಸ್ಕರಿಸಿದ ಸಭಾಧ್ಯಕ್ಷ
ಬಳಿಕ ಮಾತನಾಡಿದ ಸಭಾಧ್ಯಕ್ಷ ಕಾಗೇರಿ, ಸದನದಲ್ಲಿ ಸದಸ್ಯರ ವಾದ – ಪ್ರತಿವಾದವನ್ನು ಆಲಿಸಿದ್ದೇನೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಿಯಮಾವಳಿ ಪ್ರಕಾರ ನಿಯಮ 60ರಡಿ ಚರ್ಚೆಗೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದರು.

ಅತಿವೃಷ್ಟಿ ಹಾಗೂ ಬೆಳೆ ವಿಮೆ ಕುರಿತಂತೆ 30 ಸದಸ್ಯರು ಎಂಟೂವರೆ ಗಂಟೆಗಳ ಕಾಲ ಮಾತನಾಡಿದ್ದಾರೆ. ಹೀಗಾಗಿ, ಕಂದಾಯ ಸಚಿವ ಆರ್.ಅಶೋಕ್ ಅವರು ಉತ್ತರ ಹೇಳಲಿದ್ದಾರೆ ಎಂದು ಸಭಾಧ್ಯಕ್ಷರು ತಿಳಿಸಿದರು. ಈ ಮಧ್ಯೆ, ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಿ ಧರಣಿ ನಡೆಸಿದರು. ಈ ಹಿನ್ನೆಲೆಯಲ್ಲಿ ಸದನದಲ್ಲಿ ಏನೂ ಕೇಳದಂತಾದಾಗ ಸಭಾಧ್ಯಕ್ಷ ಕಾಗೇರಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

SCROLL FOR NEXT