ರಾಜ್ಯ

ಬ್ಯಾಂಕುಗಳ ಖಾಸಗೀಕರಣದಿಂದ ಆರ್ಥಿಕತೆ ಮೇಲೆ ಪರಿಣಾಮ: ಮುಷ್ಕರ ನಿರತ ಬ್ಯಾಂಕ್ ನೌಕರರ ಅಳಲು

Sumana Upadhyaya

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕುಗಳ ಸಾವಿರಾರು ನೌಕರರು ರಾಜ್ಯದಲ್ಲಿ ಮುಷ್ಕರಕ್ಕೆ ಇಳಿದಿದ್ದು, ರಾಜಧಾನಿ ಬೆಂಗಳೂರು ಒಂದರಲ್ಲಿಯೇ 5 ಸಾವಿರಕ್ಕೂ ಹೆಚ್ಚು ನೌಕರರು ಎರಡು ದಿನಗಳ ಕಾಲ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. 

ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ವಿರೋಧಿಸಿ ಬ್ಯಾಂಕ್ ಉದ್ಯೋಗಿಗಳು ಮುಷ್ಕರಕ್ಕೆ ಇಳಿದಿದ್ದಾರೆ. ನಿನ್ನೆ ಆರಂಭವಾಗಿರುವ ಮುಷ್ಕರದಿಂದಾಗಿ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವುಂಟಾಗಿದ್ದು ಗ್ರಾಹಕರಿಗೆ ಅನನುಕೂಲವಾಗಿದೆ. 

ಡಿಜಿಟಲ್ ಅಥವಾ ನೆಟ್ ಬ್ಯಾಂಕಿಂಗ್ ಸೇವೆಯನ್ನು ಪಡೆಯದೆ ಬ್ಯಾಂಕಿಗೆ ಖುದ್ದಾಗಿ ಹೋಗಿ ಸೇವೆ ಪಡೆಯುವ ಗ್ರಾಹಕರಿಗೆ ಇದರಿಂದ ಸಮಸ್ಯೆಯಾಗಿದೆ. ಬಡವರು, ಬಿಪಿಎಲ್ ಕಾರ್ಡು ಹೊಂದಿರುವವರು, ಬ್ಯಾಂಕ್ ಗಳಲ್ಲಿ ಜನಧನ್ ಖಾತೆಯನ್ನು ಹೊಂದಿರುವವರಿಗೆ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಬ್ಯಾಂಕ್ ನೌಕರರ ಮುಷ್ಕರದಿಂದ ಹೆಚ್ಚು ಸಮಸ್ಯೆಯುಂಟಾಗಿದೆ.

ಬ್ಯಾಂಕ್ ಯೂನಿಯನ್ ಗಳ ಸಂಯುಕ್ತ ವೇದಿಕೆಯ ಅಡಿಯಲ್ಲಿ ನೌಕರರು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆವರಣದಲ್ಲಿ ಸೇರಿ ಮುಷ್ಕರ ಆರಂಭಿಸಿದರು. ವೇದಿಕೆಯ ಸಂಚಾಲಕ ಶ್ರೀನಿವಾಸ್, ಗ್ರಾಹಕರಿಗೆ ತೊಂದರೆ ನೀಡುವುದು ತಮ್ಮ ಉದ್ದೇಶವಲ್ಲ, ಬ್ಯಾಂಕುಗಳನ್ನು ಖಾಸಗೀಕರಣ ಮಾಡಿದರೆ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಸರ್ಕಾರಕ್ಕೆ ಮತ್ತು ಜನರಿಗೆ ಸಂದೇಶ ರವಾನಿಸಲು ಈ ಮುಷ್ಕರ ನಡೆಸುತ್ತಿದ್ದೇವೆ ಎಂದರು.

SCROLL FOR NEXT