ರಾಜ್ಯ

ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ: 27 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ, ಬೆಳಗಾವಿಯಲ್ಲಿ ಸೆಕ್ಷನ್ 144 ಜಾರಿ

Lingaraj Badiger

ಬೆಳಗಾವಿ: ಬೆಳಗಾವಿಯಲ್ಲಿ ಕಳೆದ ರಾತ್ರಿ ನಡೆದ ಎಂಇಎಸ್ ಪುಂಡರ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 27 ಆರೋಪಿಗಳಿಗೆ ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಎಂಇಎಸ್ ಮುಖಂಡ ಶುಭಂ ಶಳಕೆ. ಶ್ರೀರಾಮ ಸೇನಾ ಹಿಂದುಸ್ತಾನ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ ಸೇರಿದಂತೆ 27 ಆರೋಪಿಗಳನ್ನ ಇಲ್ಲಿನ 2ನೇ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯ, ಎಲ್ಲಾ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂದನಕ್ಕೆ ಆದೇಶಿಸಿದ. ಬಂಧಿತ ಆರೋಪಿಗಳನ್ನು ಹಿಂಡಲಗಾ ಕಾರಾಗೃಹಕ್ಕೆ ಕಳಿಸಲಾಗಿದೆ.

ಎಂಇಎಸ್ ಮತ್ತು ಶಿವಸೇನೆಯ ಕೆಲವು ಸದಸ್ಯರಿಂದ ಬೆಳಗಾವಿ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. 400 ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಮಧ್ಯರಾತ್ರಿ ಕಲ್ಲು ತೂರಾಟ ನಡೆಸಿರುವ ಪುಂಡರು ಸರ್ಕಾರಿ ವಾಹನಗಳೂ ಸೇರಿದಂತೆ ಸರ್ವಜನಿಕ ವಾಹನಗಳ ಮೇಲೂ ಅಟ್ಟಹಾಸ ಮೆರೆದಿದ್ದಾರೆ. ಇದರಿಂದಾಗಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಬೆಳಗಾವಿ ಭಾಗದಲ್ಲಿ ಇಷ್ಟೆಲ್ಲ ಅನಾಹುತಗಳು ನಡೆಯುತ್ತಿದ್ದರೂ ಇಲ್ಲಿನ ಶಾಸಕರು ಮತ್ತು ಸ್ಥಳೀಯ ಮುಖಂಡರು ಏನು ತಿಳಿಯದಂತೆ ಸುಮ್ಮನೆ ಕುಳಿತಿರುವುದು ಏಕೆ ಎಂದು ಕರ್ನಾಟಕ‌ ರಕ್ಷಣ ವೇದಿಕೆ ಮುಖಂಡರು ಪ್ರಶ್ನಿಸಿದ್ದಾರೆ. ಗಲಬೆಗೆ ಕಾರಣರಾದವರ ವಿರುದ್ದ ಗೂಂಡಾ ಕಾಯ್ದೆ ಹಾಕಿ ಬಂದಿಸಬೇಕು ಎಂದಿದ್ದಾರೆ.

ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡ ಪೊಲೀಸರು: ಎಂಇಎಸ್ ಪುಂಡರ ಅಟ್ಟಹಾಸ ಮಿತಿಮೀರಿದ ಹಿನ್ನೆಲೆಯಲ್ಲಿ ನಗರದ ಮೂರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆ, ಖಡೇಬಜಾರ್ ಪೊಲೀಸ್ ಠಾಣೆ ಮತ್ತು ಮಾರ್ಕೆಟ್ ಠಾಣೆಯಲ್ಲಿ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ. ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಾನೂನು ಸುವ್ಯವಸ್ಥೆ ಹಾಳು ಮಾಡುವುದು, ಭಾಷಾ ವೈಷಮ್ಯ ಮೂಡಿಸುವುದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ನೂರಾರು ಎಂಇಎಸ್ ಪುಂಡರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

SCROLL FOR NEXT