ರಾಜ್ಯ

ಮೈಸೂರು: ಆನೆ ದಂತ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು, ನಾಲ್ವರ ಬಂಧನ

Srinivasamurthy VN

ಮೈಸೂರು: ಆನೆ ದಂತ ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಮೈಸೂರು ಪೊಲೀಸರು ಭೇದಿಸಿದ್ದು, ಪ್ರಕರಣ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಮೈಸೂರು ಅರಣ್ಯ ಸಂಚಾರಿ ದಳದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಟಿ.ನರಸೀಪುರ-ತಾಯೂರು ರಸ್ತೆಯಲ್ಲಿ ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಅಧಿಕಾರಿಗಳು ಇವರನ್ನು ಬಂಧಿಸಿದ್ದಾರೆ. 

ಬಂಧಿತರನ್ನು ಚಾರ್ಲ್ಸ್ ಸಾಹಿವೀರ್, ಸೆಲ್ವಕುಮಾರ್, ಅಂಥೋನಿ ರಾಯ್ ಮತ್ತು ಗಣೇಶ್ ಎಂದು ಗುರುತಿಸಲಾಗಿದೆ. ಇನ್ನು ಪ್ರಕರಣದ ಪ್ರಮುಖ ಆರೋಪಿ ರಾಬರ್ಟ್ ಪಿಂಟೊ ಪೆರಿಯಾರುಗಂ, ಲಿಯೋ ಫೆರ್ನಾಂಡಿಸ್ ಮತ್ತು ಜಾನ್ ಬಾಸ್ಕೋ ಸೇರಿದಂತೆ ಮೂವರು ಪರಾರಿಯಾಗಿದ್ದು, ಬಂಧಿತರಿಂದ 8 ಕೆಜಿ ತೂಕದ ಐದು ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರಿಂದ ಮತ್ತೋರ್ವನ ಬಂಧನ, ಎರಡು ದಂತ ವಶಕ್ಕೆ
ಮತ್ತೊಂದು ಪ್ರಕರಣದಲ್ಲಿ 25 ಕೆಜಿ ತೂಕದ ಎರಡು ದಂತಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ 29 ವರ್ಷದ ಯುವಕನನ್ನು ಕನಕಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿದ ಕೂಡಲೇ ವಶಪಡಿಸಿಕೊಂಡ ದಂತಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಚಾಮರಾಜನಗರ ಮೂಲದ ಮರಿಸ್ವಾಮಿ ಎಂದು ಗುರುತಿಸಲಾಗಿದ್ದು, ಈ ಕಳ್ಳ ಸಾಗಣೆಯಲ್ಲಿ ಇನ್ನೂ ಹೆಚ್ಚಿನ ಜನರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 

SCROLL FOR NEXT