ರಾಜ್ಯ

ಕೋವಿಡ್ ಸಂಭಾವ್ಯ ಮೂರನೇ ಅಲೆ ಎದುರಿಸಲು ಸರ್ಕಾರ ಸನ್ನದ್ಧ: ಮುಖ್ಯಮಂತ್ರಿ ಬೊಮ್ಮಾಯಿ

Nagaraja AB

ಮೈಸೂರು: ಮುಂಬರುವ ಕೋವಿಡ್ ನ ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಭಾನುವಾರ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಆಕ್ಸಿಜನ್ ಜನರೇಟರ್ ಮತ್ತು ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಫ್ಲಾಂಟ್ ಗಳ ಉದ್ಘಾಟನೆ, ಜೆ.ಎಸ್. ಎಸ್. ಶ್ರವಣ ಮಿತ್ರ ಆಪ್  ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ, ಈಗಾಗಲೇ ಹೊಸ ಐಸಿಯುಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ ಹಾಕಲಾಗಿದ್ದ ಆಕ್ಸಿಜನ್ ಪ್ಲಾಂಟ್ ನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಔಷಧಗಳನ್ನು ತಯಾರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮೊದಲ ಡೋಸ್ ವ್ಯಾಕ್ಸಿನೇಷನ್ ಶೇಕಡಾ 97 ರಷ್ಟಾಗಿದ್ದು, ಎರಡನೇ ಡೋಸ್ ವ್ಯಾಕ್ಸಿನೇಷನ್ ಶೇ. 76 ರಷ್ಟಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಇದೊಂದು ದಾಖಲೆಯಾಗಿದೆ. ವ್ಯಾಕ್ಸಿನೇಷನ್ ಶೇ.100ರಷ್ಟು ಆದಾಗ ಮಾತ್ರ ಕೋವಿಡ್ ನಿಂದ ಪಾರಾಗಬಹುದು. ಇದಕ್ಕಾಗಿ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಾ ಬರುತ್ತಿದೆ. ಇದರ ಜೊತೆಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ಅಕ್ಷರ ದಾಸೋಹ, ಅನ್ನ ದಾಸೋಹದ ಜೊತೆಗೆ ಜೆ.ಎಸ್. ಎಸ್. ಸಂಸ್ಥೆ ಆರೋಗ್ಯ ದಾಸೋಹವನ್ನು ನೀಡುತ್ತಿದೆ. ಸರ್ಕಾರಕ್ಕೆ ಕೋವಿಡ್ ಒಂದು ಸವಾಲಾಗಿತ್ತು. ಈ ಸವಾಲನ್ನು ಸರ್ಕಾರದ ಜೊತೆಗೆ ಹಲವಾರು ಸಂಘ ಸಂಸ್ಥೆಗಳು, ಆಸ್ಪತ್ರೆಗಳ ಸಹಕಾರದಿಂದ ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು. 

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಮೈಸೂರು ಮೇಯರ್ ಸುನಂದ ಪಾಲನೇತ್ರ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

SCROLL FOR NEXT