ರಾಜ್ಯ

ಇತಿಹಾಸ ಓದಿದರೆ ಯಾರು ಯಾರ ಪ್ರದೇಶಗಳನ್ನು ಆಕ್ರಮಿಸಿದ್ದಾರೆ ಎನ್ನುವುದು ಅರಿವಾಗಲಿದೆ: ಠಾಕ್ರೆಗೆ ಎಚ್‌ಡಿಕೆ ತಿರುಗೇಟು

Raghavendra Adiga

ಬೆಂಗಳೂರು: "ಉದ್ಧವ ಠಾಕ್ರೆ ಒಂದು ಬಾರಿ ಇತಿಹಾಸವನ್ನು ಅವಲೋಕಿಸಿದರೆ, ಈಗ ಯಾರು ಯಾರ ಪ್ರದೇಶಗಳನ್ನು ಆಕ್ರಮಿಸಿದ್ದಾರೆ ಎಂಬುದೂ ಗೊತ್ತಾಗುತ್ತದೆ. ಯಾರು ಯಾರ ಪ್ರದೇಶವನ್ನು ಬಿಟ್ಟುಕೊಡಬೇಕೆಂಬುದೂ ತಿಳಿಯುತ್ತದೆ. " ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಗೆ ಮಾಜಿ ಸಿಎಂ, ಜಾತ್ಯಾತೀತ ಜನತಾದಳ ಮುಖಂಡ ಎಚ್.ಡಿ, ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ಬೆಳಗಾವಿಯನ್ನು ಕರ್ನಾಟಕ ಆಕ್ರಮಿತ ಪ್ರದೇಶವೆಂದು ಘೋಷಿಸಲು ಚಿಂತನೆ ನಡೆಸಿದ್ದಾಗಿ ಹೇಳಿದ್ದ ಉದ್ದವ್ ಠಾಕ್ರೆ ಮಾತುಗಳಿಗೆ ರಾಜ್ಯ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಯಿಸುತ್ತಿದ್ದಾರೆ. ಸಿಎಂ ಬಿ,ಎಸ್, ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಿರಿಯ ಮುಖಂಡರು, ಕನ್ನಡ ಪರ ಹೋರಾಟಗಾರರು ಠಾಕ್ರೆ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ,

ಎಚ್.ಡಿ. ಕುಮಾರ ಸ್ವಾಮಿ ಕೂಡ ಸರಣಿ ಟ್ವೀಟ್ ಹಾಗೂ ಫೇಸ್ ಬುಕ್ ಖಾತೆಗಳಲ್ಲಿ ಈ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ.

ಕುಮಾರಸ್ವಾಮಿಯವರ ಫೇಸ್ ಬುಕ್ ಖಾತೆಯಲ್ಲಿನ ಸಂಪೂರ್ಣ ಬರಹ ಹೀಗಿದೆ-

‘ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ’ ಎಂದಿರುವ ಉದ್ಧವ್‌ ಠಾಕ್ರೆ ಅವರ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ. ಒಕ್ಕೂಟ ವ್ಯವಸ್ಥೆ ಒಪ್ಪಿ, ಭಾಷಾ ಆಧಾರದ ಮೇಲೆ ರಾಜ್ಯಗಳನ್ನು  ವಿಂಗಡಿಸಿಕೊಂಡು, ಅದಕ್ಕೆ ಬದ್ಧವಾಗಿ ನಡೆಯುತ್ತಿರುವಾಗ ಇಂಥ ವಿಸ್ತರಣಾವಾದ ಸೌಹಾರ್ದಕ್ಕೆ ಧಕ್ಕೆ ತರಲಿದೆ.

ಬಹುತೇಕ ಕನ್ನಡಿಗ ರಾಜರು ಮಹಾರಾಷ್ಟ್ರದ ಬಹುಪಾಲನನ್ನು ಆಗಲೇ ಆಳಿದ್ದಾರೆ. ಕನ್ನಡಿಗರ ಸಾಹಸ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಉದ್ಧವ ಠಾಕ್ರೆ ಒಂದು ಬಾರಿ ಇತಿಹಾಸವನ್ನು ಅವಲೋಕಿಸಿದರೆ, ಈಗ ಯಾರು ಯಾರ ಪ್ರದೇಶಗಳನ್ನು ಆಕ್ರಮಿಸಿದ್ದಾರೆ ಎಂಬುದೂ ಗೊತ್ತಾಗುತ್ತದೆ. ಯಾರು ಯಾರ ಪ್ರದೇಶವನ್ನು ಬಿಟ್ಟುಕೊಡಬೇಕೆಂಬುದೂ ತಿಳಿಯುತ್ತದೆ. 

ಬೆಳಗಾವಿಯಲ್ಲಿ ಕನ್ನಡ ಹೋರಾಟಗಾರರು ನೆಟ್ಟಿದ್ದ ಕನ್ನಡ ಧ್ವಜ ತೆರವು ಮಾಡಬೇಕು ಎಂದು ವಾದಿಸಿದ್ದ ಎಂಇಎಸ್‌ಗೆ ಸರಿಯಾದ ಪೆಟ್ಟು ಕೊಟ್ಟಿದ್ದರೆ, ಇಂದು ಉದ್ಧವ ಠಾಕ್ರೆ ಇಂಥ ಮಾತುಗಳನ್ನು ಆಡಲು ಸಾಧ್ಯವಾಗುತ್ತಿರಲಿಲ್ಲ. ಎಂಇಎಸ್‌ ಅನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವವರಿಂದ ಪ್ರೇರಣೆ ಪಡೆದೇ ಉದ್ಧವ ಠಾಕ್ರೆ ಇಂಥ ಮಾತುಗಳನ್ನು ಆಡಿದ್ದಾರೆ. 

ಗಡಿ ವಿವಾದದಲ್ಲಿ ಮಹಾಜನ ಆಯೋಗದ ತೀರ್ಪೇ ಅಂತಿಮ. ಇತ್ಯರ್ಥ ಆಗಿರುವ ವಿಷಯಗಳ ಬಗ್ಗೆ ತಗಾದೆ ತೆಗೆದು, ಬೆಳಗಾವಿಯಲ್ಲಿ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿರುವವರಲ್ಲಿ ವಿಷ ಬೀಜ ಬಿತ್ತುವುದನ್ನು ದೇಶದ್ರೋಹಿ ಕೃತ್ಯ ಎಂದೆನ್ನಬೇಕಾಗುತ್ತದೆ. ಬೆಳಗಾವಿ ವಿಚಾರಕ್ಕೆ ಬಂದರೆ ಕನ್ನಡಿಗರು ಸಿಡಿದೇಳುತ್ತಾರೆ ಎಂಬುದು ಉದ್ಧವ ಠಾಕ್ರೆಗೆ ತಿಳಿಯಲಿ.

ಬೆಳಗಾವಿ ಸಾಂಸ್ಕೃತಿಕವಾಗಿ, ಆಡಳಿತಾತ್ಮಕವಾಗಿ ಕರ್ನಾಟಕದ ಹೆಗ್ಗುರುತು. ಬೆಳಗಾವಿಯ ಬಗ್ಗೆ ಪದೇ ಪದೆ ಕಿತಾಪತಿ ಮಾಡುವ ಎಂಇಎಸ್‌ ಮತ್ತು ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ಕೊಡಬೇಕೆಂದೇ ನಾನು ಸಿಎಂ ಆಗಿದ್ದಾಗ ಅಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲಾಗಿತ್ತು. ಅದು, ಬೆಳಗಾವಿ ನಮ್ಮ ಅವಿಭಾಜ್ಯ ಅಂಗ ಎಂಬುದರ ದ್ಯೋತಕ ಎಂಬುದನ್ನು ಠಾಕ್ರೆ ಅರಿಯಲಿ. 

ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ್ದು ಮಾತ್ರವಲ್ಲ, ಅಲ್ಲಿ ವಿಧಾನಸಭೆ ಅಧಿವೇಶನ ನಡೆಯಬೇಕೆಂದು ತೀರ್ಮಾನಿಸಲಾಯಿತು. ಸುವರ್ಣ ಸೌಧ ಮಹಾರಾಷ್ಟ್ರಕ್ಕೆ ಪ್ರತ್ಯುತ್ತರವಾಗಿ ನಿಂತಿರುವ ಒಂದು ನಿರ್ಮಿತಿ. ಅದನ್ನು ಅರಿಯುವ ವಿಚಾರದಲ್ಲಿ ನಮ್ಮಲ್ಲಿನ ಕೆಲವರೂ ಎಡವಿದ್ದಾರೆ ಎಂಬುದೂ ವಾಸ್ತವ. ಅದರ ಸಮರ್ಪಕ ಬಳಕೆಯಿಂದ ಮಾತ್ರ ಅದರ ಉದ್ದೇಶ ಸಾಕಾರ.

ಬೆಳಗಾವಿ ನಮ್ಮದೆಂಬ ಮಹಾರಾಷ್ಟ್ರಕ್ಕೆ ತಿರುಗೇಟು ನೀಡುವುದು ಒಂದೆಡೆ ಇರಲಿ. ಆದರೆ, ಅಲ್ಲಿನ ಜನರಲ್ಲಿ ಕನ್ನಡಾಭಿಮಾನ ಉತ್ಕಟವಾಗಿದೆ. ಚಿಕ್ಕೋಡಿಯ ಕನ್ನಡ ಪ್ರೇಮಿಗಳಾದ ಸಿದ್ದಗೌಡ–ಅಶ್ವಿನಿ ಪಾಟೀಲ ದಂಪತಿ ತಮ್ಮ ಚೊಚ್ಚಲ ಮಗುವಿಗೆ ‘ಕನ್ನಡದ ವೃದ್ಧಿ’ ಎಂಬ ಹೆಸರಿಟ್ಟಿದ್ದಾರೆ. ಇದು ಅಲ್ಲಿನ ಕನ್ನಡಾಭಿಮಾನಕ್ಕೆ ಸಾಕ್ಷಿ. ಆ ದಂಪತಿಗೆ ನನ್ನ ನಮನ.

SCROLL FOR NEXT