ರಾಜ್ಯ

ಉಡುಪಿ: ಕೊರಗ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಿಂತನೆ

Manjula VN

ಉಡುಪಿ: ಕೊರಗ ಬುಡಕಟ್ಟು ಸಮುದಾಯದವರಿಗೆ ಪ್ರತ್ಯೇಕ ಕೋವಿಡ್ ಲಸಿಕಾ ಅಭಿಯಾನ ನಡೆಸಲು ಉಡುಪಿ ಜಿಲ್ಲಾ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

ಈಗಾಗಲೇ ಈ ಸಮುದಾಯದಲ್ಲಿರುವ 18 ವರ್ಷ ಮೇಲ್ಪಟ್ಟ ಶೇ.30ರಷ್ಟು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಉಳಿದವರಿಗೆ ಲಸಿಕೆ ನೀಡಲು ಪ್ರತ್ಯೇಕ ಲಸಿಕಾ ಅಭಿಯಾನ ನಡೆಸುವಂತೆ ಸಮಗ್ರ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮ (ಐಟಿಡಿಪಿ) ಅಧಿಕಾರಿಗಳು ಆರೋಗ್ಯ ಇಲಾಖೆಗೆ ಪತ್ರ ಬರೆದು ಮನವಿ ಮಾಡಿಕೊಂಡಿದೆ. 

ಹೀಗಾಗಿ ಕೊರಗ ಬುಡಕಟ್ಟು ಸಮುದಾಯದವರಿಗೆ ಪ್ರತ್ಯೇಕ ಕೋವಿಡ್ ಲಸಿಕಾ ಅಭಿಯಾನ ನಡೆಸಲು ಜಿಲ್ಲಾ ಆಡಳಿತ ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಉಡುಪಿ ಜಿಲ್ಲೆಯಲ್ಲಿ ಕೊರಗ ಸಮುದಾಯಕ್ಕೆ ಸೇರಿದ ಒಟ್ಟು 11,331 ಮಂದಿಯಿದ್ದು, ಇದರಲ್ಲಿ 9,849 ಮಂದಿ 18 ವರ್ಷ ಮೇಲ್ಪಟ್ಟವರಾಗಿದ್ದಾರೆ. ಸಮುದಾಯದ ಸಾಂಪ್ರದಾಯಿಕ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಇಲ್ಲಿನ ಬುಡಕಟ್ಟು ಜನರು ದಶಕಗಳಿಂದ ಶಿಕ್ಷಣ ಮತ್ತು ಇತರೆ ಸೌಲಭ್ಯಗಳಿಂದ ವಂಚಿತರಾಗಿದ್ದರು. ಸಮುದಾಯಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಲ್ಲಾ ಆಡಳಿತ ಮಂಡಳಿ ನಡೆಸಿದ ಹಲವು ಕಾರ್ಯಕ್ರಮಗಳು ಯಶಸ್ವಿಯಾಗುತ್ತಿದೆ. 

ಕೊರಗ ಸಮುದಾಯದ ನಾಯಕ ಕುಮಾರದಾಸ್ ಅವರು ಮಾತನಾಡಿ, ಸಮುದಾಯ ಸಭಾಂಗಣಗಳು, ಅಂಗನವಾಡಿಗಳು ಮತ್ತು ಶಾಲೆಗಳಂತಹ ಲಭ್ಯವಿರುವ ಪ್ರದೇಶಗಳನ್ನು ಲಸಿಕಾ ಕೇಂದ್ರಗಳಾಗಿ ಬಳಕೆ ಮಾಡಲು ಮೀಸಲಿಡಲಾಗಿದೆ. ಆರೋಗ್ಯ ಅಧಿಕಾರಿಗಳು ಕೊರಗ ಸಮುದಾಯಕ್ಕೆ ವಿಶೇಷ ಲಸಿಕಾ ಅಭಿಯಾನ ನಡೆಸುವ ಭರವಸೆ ನೀಡಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗದ ಆರಂಭದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಸಮುದಾಯದ ಜನರು ಹಿಂಜರಿಯುತ್ತಿದ್ದರು. ಆದರೀಗ ಮುಂದೆ ಬರುತ್ತಿದ್ದಾರೆ. ಸಮುದಾಯದ ಜನರೂ ಲಸಿಕೆ ಪಡೆದುಕೊಳ್ಳಲು ಸಿದ್ಧರಿದ್ದಾರೆಂದು ಹೇಳಿದ್ದಾರೆ. 

ಮಂಚಿಕೋಡಿ, ಅಂಪಾರು, ಸಿದ್ದಾಪುರ, ಕೆರಾಡಿ, ಜಡ್ಕಲ್, ಮುಂಡ್ಕೂರ್ ಮತ್ತು ಹೆಬ್ರಿ ಸೇರಿದಂತೆ ಕೊರಗ ಸಮುದಾಯಕ್ಕೆ ಸೇರಿದ ಹಲವು ಪ್ರದೇಶಗಳಲ್ಲಿ ಈಗಾಗಲೇ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಉಡುಪಿ ಜಿಲ್ಲೆಯ ಐಟಿಡಿಪಿ ಯೋಜನಾ ಅಧಿಕಾರಿ ದೂದ್ಪೀರ್ ಅವರು ಹೇಳಿದ್ದಾರೆ. 

ಕೆಲವು ಸ್ಥಳಗಳಲ್ಲಿ ಈಗಾಗಲೇ ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಮತ್ತಷ್ಟು ಪ್ರದೇಶಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 

SCROLL FOR NEXT