ರಾಜ್ಯ

ಈ ಬಾರಿ ಪಿಯುಸಿ ಸೀಟು ಸಂಖ್ಯೆ ಹೆಚ್ಚಳ: ಸಚಿವ ಸುರೇಶ್ ಕುಮಾರ್

Manjula VN

ಬೆಂಗಳೂರು: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿದ ಎಲ್ಲ ವಿದ್ಯಾರ್ಥಿಗಳನ್ನು ಪಿ.ಯು.ಸಿ ತರಗತಿಗಳ ಪ್ರವೇಶಕ್ಕೆ ಅವಕಾಶ ನೀಡಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದ್ದು, ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪಿಯುಸಿ ಸೀಟುಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ. 

ಜು.19 ಮತ್ತು 22 ರಂದು ನಡೆಯುವ ಎಸ್ಎಸ್ಎಲ್'ಸಿ ಪರೀಕ್ಷೆ ಬಗ್ಗೆ ಆತ್ಮಸ್ತೈರ್ಯ ತುಂಬಲು ಸಚಿವರು ನಿನ್ನೆಯಷ್ಟೇ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶಗಳನ್ನು ಜುಲೈ20ರ ಆಸುಪಾಸಿನಲ್ಲಿ ಪ್ರಕಟಿಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿರುವುದರಿಂದ ಆ ವಿದ್ಯಾರ್ಥಿಗಳು ಎಸ್ಎಸ್ಎಲ್'ಸಿ ಮತ್ತು ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ದ್ವಿತೀಯ ಪಿಯುಸಿ ಫಲಿತಾಂಶ ನೀಡಲಾಗುತ್ತದೆ. ಈ ಫಲಿತಾಂಶದಿಂದ ಯಾವುದೇ ಲೋಪಗಳಾದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಿಸಿದ ವಿದ್ಯಾರ್ಥಿಗಳು ತಮ್ಮ 10ನೇ ತರಗತಿ ಮತ್ತು ಪ್ರಥಮ ಪಿಯುಸಿ ಫಲಿತಾಂಶ ಪರಿಶೀಲಿಸಿಕೊಳ್ಳಲು ಜು.12ರವರೆಗೆ ಅವಕಾಶ ನೀಡಲಾಗಿದೆ. 

ಸ್ಟೂಡೆಂಟ್ಸ್ ಅಚೀವ್ಮೆಂಟ್ ಟ್ರಾಕಿಂಗ್ ಸಿಸ್ಟಮ್ (ಎಸ್ಎಎಸ್'ಟಿ) ವೆಬ್ ಪೋರ್ಟಲ್ ನಲ್ಲಿ ಈ ಎರಡೂ ಫಲಿತಾಂಶಗಳನ್ನು ಪರಿಶೀಲಿಸಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. 

ಯಾವುದೇ ವ್ಯತ್ಯಾಸಗಳಿದ್ದರೆ ಸರಿಪಡಿಸಿಕೊಳ್ಳಲೂ ಅವಕಾಶವಿದೆ. ಈ ಕಾರ್ಯ ಪೂರ್ಣಗೊಂಡರೆ ಫಲಿತಾಂಶ ನೀಡಲು ಸುಲಭವಾಗುತ್ತದೆ. ಜು.20ರ ಆಸುಪಾಸಿನಲ್ಲಿ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿದ ಎಲ್ಲ ವಿದ್ಯಾರ್ಥಿಗಳನ್ನು ಪಿ.ಯು.ಸಿ ತರಗತಿಗಳ ಪ್ರವೇಶಕ್ಕೆ ಅವಕಾಶ ನೀಡಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ. ರಾಜ್ಯದ ಸರ್ಕಾರಿ ಪಿಯು ಕಾಲೇಜಗಳಲ್ಲಿ ಪಿಯುಸಿ ಸೀಟುಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಶಾಲೆಗಳಿಂದಲೂ ಸೀಟುಗಳ ಹೆಚ್ಚಳದ ಕೋರಿಕೆಗಳು ಬಂದರೆ ಪರಿಗಣಿಸಿ ಎಲ್ಲ ವಿದ್ಯಾರ್ಥಿಗಳಿಗೂ ಪಿಯುಸಿ ಸೀಟು ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ. 

SCROLL FOR NEXT