ರಾಜ್ಯ

ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ, ಸದ್ಯದಲ್ಲಿಯೇ ಕೆಆರ್ ಎಸ್ ಗೆ ಹೋಗುತ್ತೇನೆ: ಸುಮಲತಾ ಅಂಬರೀಷ್

Sumana Upadhyaya

ಬೆಂಗಳೂರು: ಸದ್ಯದಲ್ಲಿಯೇ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಮತ್ತು ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಅಕ್ರಮ ಗಣಿಗಾರಿಕೆ ಬಗ್ಗೆ ಪರಿಶೀಲಿಸುತ್ತೇನೆ ಎಂದು ಮಂಡ್ಯ ಸಂಸದ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಅವರ ನಿವಾಸದ ಹೊರಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಲಾಶಯ ಬಳಿ ಹೋಗಲು ಈವರೆಗೆ ಕೊರೋನಾ ನಿಯಮದ ಕಾರಣ ಕಾವೇರಿ ನಿಗಮದ ಅನುಮತಿಯಿರಲಿಲ್ಲ. ಕಾವೇರಿ ನೀರಾವರಿ ನಿಗಮದ ಅನುಮತಿ ಪಡೆದು ಹೋಗುತ್ತೇನೆ. ಸದ್ಯದಲ್ಲಿಯೇ ದಿನ ನಿಗದಿ ಮಾಡಿ ಕೆಆರ್ ಎಸ್ ಗೆ ಮತ್ತು ಬೇಬಿ ಬೆಟ್ಟಕ್ಕೆ ಭೇಟಿ ನೀಡುತ್ತೇನೆ ಎಂದರು.

ಜಿಲ್ಲೆಯ ಅಕ್ರಮ ಗಣಿಗಾರಿಕೆ ಸಂಬಂಧ ಮಾತುಕತೆ ನಡೆಸಲು ಗಣಿ ಸಚಿವರ ಭೇಟಿಗೆ ಸಮಯಾವಕಾಶ ಕೇಳಿದ್ದೇನೆ, ಇಂದು ಅವರು ಸಮಯ ನೀಡುವ ಸಾಧ್ಯತೆಯಿದೆ,ಅವರನ್ನು ಭೇಟಿ ಮಾಡಿ ವಿಷಯ ವಿವರಿಸುತ್ತೇನೆ, ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವೆ ಎಂದು ಸುಮಲತಾ ಹೇಳಿದರು.

ಕೆಆರ್ ಎಸ್ ಜಲಾಶಯದ ಭದ್ರತೆ ಬಗ್ಗೆ ಅಧಿಕಾರಿಗಳು ವರದಿ ಕೊಡುತ್ತಾರೆ ಅಷ್ಟೇ, ಸರ್ಟಿಫಿಕೇಟ್ ನಮಗೆ ಬೇಕು, ಅದನ್ನು ಕೊಡುವುದು ಪರಿಸರ ಇಲಾಖೆ ಮತ್ತು ಅದಕ್ಕೆ ಸಂಬಂಧಪಟ್ಟ ಸಂಸ್ಥೆಗಳು, ಪ್ರಮಾಣಪತ್ರಕ್ಕೆ ನಾವು ಕಾಯೋಣ ಎಂದರು.

ಕೆಆರ್ ಎಸ್ ಜಲಾಶಯ ಬಿರುಕು ಬಿಟ್ಟಿಲ್ಲ ಎಂದು ಪ್ರಮಾಣಪತ್ರ ಸಿಕ್ಕಿದರೆ ಸಂತೋಷಪಡುವವಳು ನಾನು, ಅಲ್ಲಿನ ಜನರ ಜೀವನಕ್ಕೆ ಸುರಕ್ಷತೆ ಬೇಕಾಗಿದೆ. ಜಲಾಶಯದ ಭದ್ರತೆ ವಿಚಾರದಲ್ಲಿ ರಾಜಕೀಯವಾಗಿ ಏನೇ ಬಂದರೂ ನಾನು ನನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಜೆಡಿಎಸ್ ನಾಯಕರು ತಮ್ಮ ಅಪ್ರಬುದ್ಧ ಹೇಳಿಕೆಗಳನ್ನು ಮುಂದುವರಿಸುತ್ತಿದ್ದರೆ ಅವರ ನಿಜಸ್ವರೂಪ ಜನರಿಗೆ ಗೊತ್ತಾಗುತ್ತದೆ, ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕ ಬೆಲೆಯನ್ನು ಅವರು ತೆರಬೇಕಾಗುತ್ತದೆ. ಸಂಸದೆಯಾಗಿ ನನ್ನ ಜವಾಬ್ದಾರಿ ನನಗೆ ಗೊತ್ತಿದೆ ಎಂದು ಇಂದು ಸಹ ಜೆಡಿಎಸ್ ದಳಪತಿಗಳ ಮೇಲೆ ಸುಮಲತಾ ಅಂಬರೀಷ್ ಹರಿಹಾಯ್ದಿದ್ದಾರೆ.

ಸತ್ಯದ ಪರ ಹೋರಾಟ ಮಾಡುವಾಗ ಈ ರೀತಿ ಅಡೆತಡೆಗಳು, ಶತ್ರುಗಳು ಹುಟ್ಟಿಕೊಳ್ಳುವುದು ಸಹಜ, ಇದರಿಂದಲೇ ನಾನು ಸತ್ಯದ ಪರ ಹೋರಾಡುತ್ತಿದ್ದೇನೆ ಎಂದು ಗೊತ್ತಾಗುತ್ತದೆ ಎಂದು ತಮ್ಮ ನಡೆಯನ್ನು ಸುಮಲತಾ ಅಂಬರೀಷ್ ಸಮರ್ಥಿಸಿಕೊಂಡಿದ್ದಾರೆ. 

SCROLL FOR NEXT