ರಾಜ್ಯ

ರಾಕ್ ಲೈನ್ ವೆಂಕಟೇಶ್ ನಿವಾಸದ ಮುಂದೆ ಜೆಡಿಎಸ್ ಪ್ರತಿಭಟನೆ: ಸಂಸದೆ ಸುಮಲತಾ ಮನೆ ಮುಂದೆ ಪೊಲೀಸ್ ಭದ್ರತೆ ಹೆಚ್ಚಳ

Sumana Upadhyaya

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನಲ್ಲಿ ಜೆಡಿಎಸ್ ಅಭಿಮಾನಿಗಳು, ಕಾರ್ಯಕರ್ತರು ತೀವ್ರ ಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಸುಮಲತಾ ಅಂಬರೀಷ್ ಅವರ ಬೆಂಗಳೂರು ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ.

ಸುಮಲತಾ ವಿರುದ್ಧ ಮಾತನಾಡಿದ ಕುಮಾರಸ್ವಾಮಿ ಮೇಲೆ ಗಂಭೀರ ಆರೋಪ ಮಾಡಿದ್ದ ರಾಕ್​ಲೈನ್​ ವೆಂಕಟೇಶ್, ತಮ್ಮ ಮತ್ತು ಸುಮಲತಾ ಅಂಬರೀಶ್ ಬಗ್ಗೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ, ಹುಸಿ ಆಡಿಯೋ ಬಾಂಬ್ ಮೂಲಕ ಹೆದರಿಸುತ್ತಿದ್ದಾರೆ, ಅಂಬಿ ಸ್ಮಾರಕ ವಿಚಾರದಲ್ಲಿ ಕುಮಾರಸ್ವಾಮಿಯವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು ಎಂದಿದ್ದರು.

ಇದನ್ನಿಟ್ಟುಕೊಂಡು ಕುಮಾರಸ್ವಾಮಿ ಅಭಿಮಾನಿಗಳು ಇಂದು ತೀವ್ರ ಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಅಭಿಮಾನಿಗಳು ರಾಕ್​ಲೈನ್ ನಿವಾಸಕ್ಕೆ ಮುತ್ತಿಗೆ ಹಾಕಿ, ಕ್ಷಮೆ ಕೇಳುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಮೊದಲೇ ಮುನ್ಸೂಚನೆ ಇದ್ದ ಕಾರಣ ರಾಕ್​ಲೈನ್ ವೆಂಕಟೇಶ್ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. ರಾಕ್​ಲೈನ್ ನಿವಾಸದ ಎದುರು ಒಂದು ಕೆಎಸ್​ಆರ್​ಪಿ ತುಕಡಿ ನಿಯೋಜಿಸಿ, ರಾಕ್​ಲೈನ್ ನಿವಾಸಕ್ಕೆ ತೆರಳುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿದ್ದರು.

ಈಗ ಸುಮಲತಾ ಅಂಬರೀಷ್ ಅವರ ನಿವಾಸದ ಮುಂದೆ ಕೂಡ 40ಕ್ಕೂ ಹೆಚ್ಚು ಪೊಲೀಸರು, ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ರಾಕ್ ಲೈನ್ ನಿವಾಸದ ಮುಂದೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಷ್ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.

SCROLL FOR NEXT