ರಾಜ್ಯ

ಹೆತ್ತವರ ಸಂಬಂಧ ಅನಧಿಕೃತ ಇರಬಹುದು, ಮಕ್ಕಳಲ್ಲ; ಎರಡನೇ ಪತ್ನಿ ಮಕ್ಕಳು ನೌಕರಿ ಪಡೆಯಲು ಅರ್ಹರು: ಹೈಕೋರ್ಟ್

Shilpa D

ಬೆಂಗಳೂರು: ಪೋಷಕರ ಸಂಬಂಧ ಅನಧಿಕೃತ ಇರಬಹುದು. ಆದರೆ, ಅವರ ಮಕ್ಕಳು ಅನಧಿಕೃತ ಅಲ್ಲ, ಹೀಗಾಗಿ ಎರಡನೆಯ ಪತ್ನಿಯ ಮಕ್ಕಳಿಗೂ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅಧಿಕಾರವಿರುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.  

ಎರಡನೇ ಪತ್ನಿಯ ಮಕ್ಕಳು ಅನುಕಂಪದ ನೌಕರಿ ಪಡೆಯಲು ಅರ್ಹರಲ್ಲ ಎಂದು 2011ರ ಕೆಪಿಟಿಸಿಎಲ್‌(ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ಸುತ್ತೋಲೆ ಪ್ರಶ್ನಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ. 

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಡವೆಕೆರೆ ನಿವಾಸಿ ಸಂತೋಷ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ವಿಭಾಗೀಯ ಪೀಠ ನಡೆಸಿತು, ಲೈನ್‌ಮನ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು 2014ರ ಜೂನ್‌ನಲ್ಲಿ ನಿಧನರಾದರು. ಅನುಕಂಪದ ಆಧಾರದಲ್ಲಿ ನೌಕರಿ ಕೋರಿ ಎರಡನೇ ಪತ್ನಿ ಮಗ ಸಲ್ಲಿಸಿದ್ದ ಅರ್ಜಿಯನ್ನು ಕೆಪಿಟಿಸಿಎಲ್‌ ತಿರಸ್ಕರಿಸಿತ್ತು.

ಮೊದಲ ಪತ್ನಿ ಇದ್ದಾಗಲೇ ಎರಡನೇ ವಿವಾಹವಾದರೆ ಆ ಪತ್ನಿ ಅಧಿಕೃತ ಅಲ್ಲ. ತಾಯಿ ಅನಧಿಕೃತ ಆಗಿರುವ ಕಾರಣ ಮಗನೂ ಅನಧಿಕೃತ ಎಂದು ವಾದಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿ ಮತ್ತು ಮರು ಪರಿಶೀಲನಾ ಅರ್ಜಿಯನ್ನು ಏಕ ಸದಸ್ಯ ಪೀಠ ತಿರಸ್ಕರಿಸಿತ್ತು. ‘ತಂದೆ ಮತ್ತು ತಾಯಿ ಇಲ್ಲದೆ ಮಗು ಜನಿಸಲು ಸಾಧ್ಯವಿಲ್ಲ. ಜನ್ಮ ತಾಳುವ ಪ್ರಕ್ರಿಯೆಯಲ್ಲಿ ಮಗುವಿನ ಪಾತ್ರ ಏನೂ ಇರುವುದಿಲ್ಲ.

ಆದ್ದರಿಂದ, ಪೋಷಕರು ಅನಧಿಕೃತ ಇರಬಹುದು, ಆದರೆ, ಮಕ್ಕಳು ಅನಧಿಕೃತ ಅಲ್ಲ ಎಂಬ ಅಂಶವನ್ನು ಪರಿಗಣಿಸಬೇಕಾಗುತ್ತದೆ.

ಮಕ್ಕಳೆಲ್ಲರೂ ಸಮಾನರು ಎಂಬ ಕಾನೂನನ್ನು ಜಾರಿಗೆ ತರಬಹುದಾಗಿದೆ. ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳಿಗೂ ನ್ಯಾಯ ದೊರಕಿಸಲು ಸಂಸತ್ ಮುಂದಾಗಬೇಕಿದೆ’ ಎಂದು ಪೀಠ ಹೇಳಿತು. ಅರ್ಜಿದಾರರ ಮನವಿಯನ್ನು ಕಾನೂನಿನ ಅಡಿಯಲ್ಲಿ ಪರಿಗಣಿಸಲು ಕೆಪಿಟಿಸಿಎಲ್‌ಗೆ ಪೀಠ ನಿರ್ದೇಶನ ನೀಡಿತು.

SCROLL FOR NEXT