ರಾಜ್ಯ

'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರದ ಪ್ರಸಾರಕ್ಕೆ ಹೈಕೋರ್ಟ್ ತಡೆ

Shilpa D

ಬೆಂಗಳೂರು: ಅರಣ್ಯ ಇಲಾಖೆಯ ನಿವೃತ್ತ ಐಎಫ್‌ಎಸ್ ಅಧಿಕಾರಿಯೊಬ್ಬರು ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರದ ಹಕ್ಕುಗಳು ಮತ್ತು ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ಡೇವ್ ಅವರಿಗೆ, ನಿವೃತ್ತ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಶಿವ ರಾಜ್ ಸಿಂಗ್ ಅವರು  ಪತ್ರ ಬರೆದಿದ್ದರು. ಪತ್ರದಲ್ಲಿ ನಿರ್ದೇಶಕರು ವಿದೇಶಿ ಏಜೆನ್ಸಿಗಳ ಮೂಲಕ ವಿವಿಧ ಅಂತಾರಾಷ್ಟ್ರೀಯ ಚಾನೆಲ್‌ಗಳಲ್ಲಿ ಸಾಕ್ಷ್ಯಚಿತ್ರವನ್ನು ಹೇಗೆ ಕಾನೂನುಬಾಹಿರವಾಗಿ ವಾಣಿಜ್ಯಿಕರಣಗೊಳಿಸಿ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ವಿವರಿಸಿದ್ದರು.

ಪತ್ರದಲ್ಲಿ ಅರಣ್ಯ ಇಲಾಖೆಯ ಐಎಫ್‌ಎಸ್ ಅಧಿಕಾರಿಗಳು ಮತ್ತು ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರಕ್ಕಾಗಿ ಕೆಲಸ ಮಾಡಿದ ಸಾಕ್ಷ್ಯಚಿತ್ರ ತಯಾರಕರುಗಳ ಹೆಸರನ್ನು ಅಧಿಕಾರಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೈಲ್ಡ್ ಕರ್ನಾಟಕ’ ಅಥವಾ ‘ಇಂಡಿಯಾಸ್ ವೈಲ್ಡ್ ಕರ್ನಾಟಕ’ ಎಂಬ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಪ್ರತಿವಾದಿಗಳಾದ ಶರತ್ ಚಂಪತಿ ಮತ್ತು ಇತರ ನಾಲ್ವರು ಅಥವಾ ಹಕ್ಕು ಪ್ರತಿಪಾದಿಸುವ ಯಾರೊಬ್ಬರೂ ಈ ಸಾಕ್ಷ್ಯಚಿತ್ರವನ್ನು ಪ್ರಕಟಿಸಬಾರದು. ಈ ಚಿತ್ರದ ಮರು ನಿರ್ಮಾಣ, ಪ್ರಸಾರ ಮತ್ತು ಮಾರಾಟ ಸೇರಿ ಎಲ್ಲಾ ವ್ಯವಹಾರಕ್ಕೆ ತಡೆ ನೀಡಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ರವೀಂದ್ರ ರೆಡ್ಕರ್ ಮತ್ತು ಆರ್‌.ಕೆ. ಉಲ್ಲಾಸ್ ಕುಮಾರ್, ‘ಈ ಚಿತ್ರವನ್ನು ಜಗತ್ತಿನಾದ್ಯಂತ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಚಿತ್ರ ನಿರ್ಮಾಣ ವಿಷಯದಲ್ಲಿ ಖಾಸಗಿ ವ್ಯಕ್ತಿಗಳೊಂದಿಗೆ ಅರಣ್ಯ ಇಲಾಖೆ ಮಾಡಿಕೊಂಡಿರುವ ಒಡಂಬಡಿಕೆಯು ಕೆಟಿಪಿಪಿ (ಕರ್ನಾಟಕ ಪಾರದರ್ಶಕ) ಕಾಯ್ದೆ ಪ್ರಕಾರ ಇಲ್ಲ. ಹೀಗಾಗಿ, ಸಾಕ್ಷ್ಯಚಿತ್ರದ ಪ್ರಸಾರಕ್ಕೆ ತಡೆ ನೀಡಬೇಕು’ ಎಂದು ಕೋರಿದ್ದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,  ಅರಣ್ಯ ಪರಿಸರ ಮತ್ತು ಪರಿಸರ ವಿಜ್ಞಾನ ವಿಭಾಗ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಪಡೆ ಮತ್ತು ಪಿಸಿಸಿಎಫ್ ವನ್ಯಜೀವಿ ಮತ್ತು ಮುಖ್ಯ ವನ್ಯಜೀವಿ ವಾರ್ಡನ್‌ಗೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲು ಅಥವಾ ಪ್ರತಿನಿಧಿಸಲು ಹೈಕೋರ್ಟ್ ಸೂಚನೆ ನೀಡಿದೆ.

ನಾನು ಪತ್ರವನ್ನು ಸ್ವೀಕರಿಸಿದ್ದೇನೆ ಮತ್ತು ಅದನ್ನು ಪರಿಶೀಲಿಸಲಿಸುತ್ತೇನೆ. ವಾಸ್ತವವಾಗಿ ಪತ್ರ ಬರೆದಿರುವ ಅಧಿಕಾರಿ ಕೂಡ ಎಂಒಯುಗಳಿಗೆ ಸಹಿ ಹಾಕಿದಾಗ ಇಲಾಖೆಯಲ್ಲಿದ್ದರು. ಹಿರಿಯ ಅರಣ್ಯ ಅಧಿಕಾರಿಗಳು ಆರೋಪದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಮುಖ್ಯ ಕಾರ್ಯದರ್ಶಿ ಸಂದೀಪ್ ದೇವ್ ತಿಳಿಸಿದ್ದಾರೆ.

SCROLL FOR NEXT