ರಾಜ್ಯ

ಅರಣ್ಯ ಇಲಾಖೆ ಕಾರ್ಯಾಚರಣೆ: ಸೆಪ್ಟಿಕ್‌ ಟ್ಯಾಂಕ್ ನಲ್ಲಿ ಸಿಲುಕಿದ್ದ ಆನೆ ಮರಿ ರಕ್ಷಣೆ 

Srinivas Rao BV

ಮಡಿಕೇರಿ: ತೆರೆದ ಸೆಪ್ಟಿಕ್ ಟ್ಯಾಂಕ್ ನಲ್ಲಿ ಬಿದ್ದಿದ್ದ ಆನೆ ಮರಿಯನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ. ಕೊಡಗಿನ ಅರಣ್ಯ ಇಲಾಖೆ ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿದೆ. ವಿರಾಜಪೇಟೆ ತಾಲೂಕಿನ ಬದ್ರಗೋಲದಲ್ಲಿ ಈ ಘಟನೆ ವರದಿಯಾಗಿದೆ. 

ಮಂಗಳವಾರ ಬೆಳಿಗ್ಗೆ ಗ್ರಾಮಸ್ಥರಿಗೆ ಆನೆ ಘೀಳಿಡುತ್ತಿದ್ದದ್ದು ಕೇಳಿಸಿದೆ. 5 ವರ್ಷಗಳ ಆನೆ ಮರಿ ಸ್ಥಳೀಯ ನಿವಾಸಿ ಎಂಎಂ ಸುಬ್ರಹ್ಮಣಿ ಅವರಿಗೆ ಸೇರಿದ ಜಾಗದಲ್ಲಿ ಅಗೆದಿದ್ದ ತೆರೆದ ಸೆಪ್ಟಿಕ್ ಟ್ಯಾಂಕ್ ನಲ್ಲಿ ಸಿಲುಕಿದ್ದು ಕಂಡುಬಂದಿದೆ. ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಿತಿಮತಿಯ ಆರ್ ಎಫ್ಒ ಅಶೋಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ಆನೆ ಮರಿಯನ್ನು ಮೇಲೆ ಎಳೆಯಲು ಸತತ ಒಂದು ಗಂಟೆಗಳ ಕಾಲ ಪ್ರಯತ್ನ ನಡೆದಿದೆ. ಆದರೆ ಫಲಿಸಲಿಲ್ಲ. ಎಲ್ಲ ಪ್ರಯತ್ನಗಳೂ ವಿಫಲವಾದಾಗ ಮತ್ತಿಗೋಡು ಆನೆ ಶಿಬಿರದಿಂದ ಕುಂತಿ ಆನೆಯನ್ನು ಕರೆಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಕೊನೆಗೆ ಆನೆ ಮರಿಯ ಕೊರಳಿಗೆ ಹಗ್ಗ ಕಟ್ಟಿ ಕುಂತಿ ಆನೆಯ ಮೂಲಕ ಎಳೆಸಲಾಯಿತು.

"ಸತತ ಎರಡು ಗಂಟೆಗಳ ಕಾರ್ಯಾಚರಣೆಯ ನಂತರ ಆನೆಯನ್ನು ರಕ್ಷಿಸಲಾಗಿದೆ, ಆದರೆ ತಕ್ಷಣಕ್ಕೆ ಆನೆಯ ಹಿಂಡು ಅಲ್ಲೆಲ್ಲೂ ಕಾಣಿಸಲಿಲ್ಲ. ಆನೆ ಮರಿಯನ್ನು ಹಿಂಡಿನ ಜೊತೆ ಸೇರಿಸಲು ದೇವರಪುರ ದೇವರ ಕಾಡು ವ್ಯಾಪ್ತಿಯಲ್ಲಿ ಶೋಧಕಾರ್ಯಾಚರಣೆ ನಡೆದಿದೆ" ಎಂದು ಆರ್ ಎಫ್ಒ ಅಶೋಕ್ ತಿಳಿಸಿದ್ದಾರೆ. 

SCROLL FOR NEXT