ರಾಜ್ಯ

ತಮ್ಮ ಇಲಾಖೆಗಳ ಬಾಕಿ ಕಡತಗಳನ್ನು ಶೂನ್ಯಕ್ಕೆ ಇಳಿಸಿದ ಅಶ್ವತ್ಥನಾರಾಯಣ, 3,760 ಕಡತ ವಿಲೇವಾರಿ

Lingaraj Badiger

ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ, ಐಟಿ- ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಶೀಲತಾ ಸಚಿವರಾಗಿದ್ಡಾ ಸಿಎನ್ ಅಶ್ವತ್ಥನಾರಾಯಣ ಅವರು ತಮ್ಮ  700 ದಿನಗಳ ಅಧಿಕಾರಾವಧಿಯಲ್ಲಿ ಇಲಾಖೆಯಲ್ಲಿ ಬಾಕಿ ಇರುವ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಅಂದರೆ, ಇಲಾಖೆಯಲ್ಲಿ ಬಾಕಿ ಇದ್ದ ಒಟ್ಟು 3,760 ಕಡತಗಳನ್ನು ಸಚಿವರು ವಿಲೇವಾರಿ ಮಾಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು 26ರಂದು ರಾಜೀನಾಮೆ ನೀಡುವವರೆಗೆ ಅಶ್ವತ್ಥನಾರಾಯಣ ಅವರು ತಮ್ಮ ಇಲಾಖೆಗಳಲ್ಲಿದ್ದ ಎಲ್ಲ ಕಡತಗಳನ್ನು ವಿಲೇವಾರಿ ಮಾಡಿ, ಬಾಕಿ ಕಡತಗಳ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಿದ್ದಾರೆ.

ಇ-ಆಫೀಸ್ (ಕಾಗದ ರಹಿತ ಕಡತ) ವ್ಯವಸ್ಥೆಯ ಮೂಲಕವೂ ಸಾವಿರಾರು ಕಡತಗಳನ್ನು ಪಾರದರ್ಶಕವಾಗಿ ವಿಲೇವಾರಿ ಮಾಡಲಾಗಿದೆ. ಇ- ಕಚೇರಿ ಮೂಲಕವೇ ವಿಶ್ವವಿದ್ಯಾಲಯಗಳ ಕಡತಗಳ ವಿಲೇವಾರಿ ಕೂಡ ಆರಂಭವಾಗಿದೆ.

ಒಟ್ಟು 3,760 ಕಡತ ವಿಲೇವಾರಿ
ಅಶ್ವತ್ಥನಾರಾಯಣ ಅವರು ತಾವು ಅಧಿಕಾರ ಸ್ವೀಕರಿಸಿದಾಗಿನಿಂದ ನಿರ್ಗಮಿಸುವ ದಿನದವರೆಗೂ ಒಟ್ಟು 3,760 ಕಡತಗಳನ್ನು ವಿಲೇವಾರಿ ಮಾಡಿದ್ದಾರೆ. ಬಂದ ಕಡತಗಳನ್ನು ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡಿದ್ದಾರೆ. 

ಉನ್ನತ ಶಿಕ್ಷಣ ಇಲಾಖೆಯಲ್ಲಿ ಒಟ್ಟು 1,746 ಮ್ಯಾನುಯಲ್ ಕಡತಗಳು ಹಾಗೂ 1,441 ಇ-ಕಡತಗಳು ಬಂದಿದ್ದು, ಅವೂ ವಿಲೇವಾರಿ ಆಗಿವೆ. 

ಎಲೆಕ್ಟ್ರಾನಿಕ್ಸ್ ಮತ್ತು ಐಟಿ-ಬಿಟಿ ಇಲಾಖೆಯಲ್ಲಿ 62 ಮ್ಯಾನುಯಲ್, 86 ಇ-ಕಡತಗಳು ವಿಲೇವಾರಿ ಆಗಿವೆ. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ 84 ಮ್ಯಾನುಯಲ್ 96 ಇ-ಕಡತಗಳು ಬಂದಿದ್ದವು. ವೈದ್ಯಕೀಯ ಶಿಕ್ಷಣ ಇಲಾಖೆಗೆ ಬಂದಿದ್ದ 245 ಮ್ಯಾನುಯಲ್ ಕಡತಗಳನ್ನೂ ಡಾ.ಅಶ್ವತ್ಥನಾರಾಯಣ ಅವರು ಕ್ಲಿಯರ್ ಮಾಡಿದ್ದಾರೆ.

ಒಟ್ಟಾರೆಯಾಗಿ ಅವರು 2,137 ಮ್ಯಾನುಯಲ್ ಕಡತಗಳು, 1,633 ಇ-ಕಡತಗಳನ್ನು ಬಾಕಿ ಇಟ್ಟುಕೊಳ್ಳದೇ ವಿಲೇವಾರಿ ಮಾಡಿದ್ದಾರೆ. ಕೆಲವೊಮ್ಮೆ ರಾತ್ರಿ ಹತ್ತು ಗಂಟೆಯವರೆಗೂ ಕಚೇರಿಯಲ್ಲೇ ಕೂತು ಕಡತಗಳನ್ನು ವಿಲೇವಾರಿ ಮಾಡಿದ್ದರು.

ಕಡತ ವಿಲೇವಾರಿ ಕುರಿತು ಮಾತನಾಡಿರುವ ಅಶ್ವತ್ಥನಾರಾಯಣ, ಯಾವುದೇ ಕೆಲಸವನ್ನು ಬಾಕಿ ಇಟ್ಟುಕೊಳ್ಳುವುದು ತಮ್ಮ ಜಾಯಮಾನವಲ್ಲ. ಬಂದ ಕಡತವನ್ನೂ ಅಧಿಕಾರಿಗಳ ಜತೆ ಚರ್ಚೆ ಮಾಡಿ ಸಾಧ್ಯವಾದಷ್ಟು ತ್ವರಿತವಾಗಿ ಕ್ಲಿಯರ್ ಮಾಡಿದ್ದೇನೆ. ಪ್ರವಾಸ ಇದ್ದಾಗ ಒಂದು ಅಥವಾ ಎರಡು ದಿನ ತಡವಾಗಿರುವುದು ಬಿಟ್ಟರೆ ಬಾಕಿ ಇಟ್ಟುಕೊಳ್ಳುವ ಪ್ರಶ್ನೆಯೇ ಇರಲಿಲ್ಲ ಎಂದಿದ್ದಾರೆ.

ಇ-ಆಫೀಸ್ ವ್ಯವಸ್ಥೆಯಿಂದ ಅನೇಕ ಫೈಲುಗಳು ವೇಗವಾಗಿ ವಿಲೇವಾರಿ ಆಗಿವೆ. ಇದರಿಂದ ನಾನು ನಿರ್ವಹಣೆ ಮಾಡುತ್ತಿದ್ದ ಎಲ್ಲ ಇಲಾಖೆಗಳಲ್ಲಿ ಕ್ಷಮತೆ ಹೆಚ್ಚಾಗಿದೆ. ಕಡತ ವಿಲೇವಾರಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವ ಸಂಬಂಧ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಆಸಕ್ತಿ ತೋರಿದ್ದು, ಇದು ಒಳ್ಳೆ ಬೆಳವಣಿಗೆ. ಇದರಿಂದ ಪಾರದರ್ಶಕತೆ ಬರುತ್ತೆ ಎಂಬುದು ತಮ್ಮ ನಂಬಿಕೆ ಎಂದಿದ್ದಾರೆ.

SCROLL FOR NEXT