ರಾಜ್ಯ

ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಕೃಷ್ಣಾ ಮೇಲ್ದಂಡೆ 3ನೇ ಹಂತದ ಕಾಮಗಾರಿಗೆ ಚಾಲನೆ: ಸಿಎಂ ಬೊಮ್ಮಾಯಿ

Manjula VN

ಹುಬ್ಬಳ್ಳಿ: ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ ತಾವು ಬದ್ದರಾಗಿದ್ದು, ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದ್ದು, ತೀರ್ಪು ಹೊರಬಿದ್ದ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೃಷ್ಣಾ ನದಿ ನೀರಿನ ಹಂಚಿಕೆ ಕುರಿತು ಸುಪ್ರೀಂಕೋರ್ಟ್ ಆದೇಶದಂತೆ ಬ್ರಿಜೇಶ್ ಕುಮಾರ್ ಪಟೇಲ್ ಅವರ ನೇತೃತ್ವದಲ್ಲಿ ಟ್ರಿಬ್ಯುನಲ್ ರಚಿಸಲಾಯಿತು. ಇದರ ತೀರ್ಪಿನಂತೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುವ ಹಂತದಲ್ಲಿ ಆಂಧ್ರಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಏರಿತು. ಮಹಾರಾಷ್ಟ್ರ ಹಾಗೂ ಕರ್ನಾಟಕ ಒಟ್ಟಾಗಿ ಇದನ್ನು ಎದುರಿಸುತ್ತಿದ್ದೇವೆ. ಮುಂದಿನ ಒಂದುವರೆ ತಿಂಗಳ ಒಳಗಾಗಿ ಸುಪ್ರೀಂಕೋರ್ಟ್ ತೀರ್ಪು ಬರಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ನಮ್ಮ ಪಾಲಿನ ನೀರಿನ ಬಳಕೆಗೆ ಅನುಮತಿ ದೊರೆಯುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ತಕ್ಷಣ ಪುನರ್ವಸತಿ ಕಾರ್ಯಕ್ರಮ ರೂಪಿಸಲಾಗುವುದು. ಜೊತೆಗೆ ಆಲಮಟ್ಟಿ ಜಲಾಶಯದ ಎತ್ತರವನ್ನು ಏರಿಸಲಾಗುವುದು. ಈ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯಿದೆ. 

ಜಲಾಶಯದ ಎತ್ತರ ಹೆಚ್ಚಳದಿಂದ 13.50 ಲಕ್ಷ ಚದುರ ಪ್ರದೇಶ ನೀರಾವರಿಗೆ ಒಳಪಡುವುದು. ಇದಕ್ಕೆ ಪ್ರಾಶಸ್ತ್ಯ ನೀಡಿ ಕೆಲಸ ಮಾಡಲಾಗುವುದು ಎಂದು ಕೃಷ್ಣಾ ಮೇಲ್ದಂಡೆ ಎರಡನೇ ಹಂತದ ಯೋಜನೆ ಪೂರ್ಣಗೊಳಿಸುವ ಕುರಿತು ಮಹತ್ವದ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. 

SCROLL FOR NEXT