ರಾಜ್ಯ

ಅಂಧ ದಂಪತಿಯ ಕಷ್ಟಕ್ಕೆ ಮರುಗಿ ಸಹಾಯ ಮಾಡಿದ ಪಿಎಸ್ ಐ: ಪೊಲೀಸ್ ಅಧಿಕಾರಿಗಳಿಂದ ಮೆಚ್ಚುಗೆ!

Sumana Upadhyaya

ಬೆಂಗಳೂರು: ಕೊರೋನಾ ಎರಡನೇ ಅಲೆಯ ಈ ಸಂದರ್ಭದಲ್ಲಿ ಹಲವರು ಅಸಹಾಯಕ ಸ್ಥಿತಿಯಲ್ಲಿರುವವರಿಗೆ ನೆರವಾಗುತ್ತಿದ್ದಾರೆ. ಬೆಂಗಳೂರಿನ ಕರ್ತವ್ಯನಿರತ ಪೊಲೀಸ್ ಅಂಧ ದಂಪತಿಗೆ ನೆರವಾಗುವ ಮೂಲಕ ಸುದ್ದಿಯಾಗಿದ್ದಾರೆ.

ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆ ಬಳಿ ಇದ್ದ ಅಂಧ ದಂಪತಿಯನ್ನು ಕಂಡ ಪಿಎಸ್ ಐ ಮನು ಅವರು ದಿನಸಿ ಪದಾರ್ಥ, ಔಷಧ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಅಂಧ ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ.

ಪಿಎಸ್ ಐ ಮನು ಅವರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಯಶವಂತಪುರದ ಆರ್ ಎಂಸಿ ಯಾರ್ಡ್ ಸಮೀಪದ ನಿವಾಸಿಗಳಾದ ಬಸವರಾಜು ಮತ್ತು ಚಿನ್ನಮ್ಮ ಅಂಧ ದಂಪತಿಗೆ ಎರಡು ವರ್ಷದ ಮತ್ತು ಆರು ತಿಂಗಳ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಇದ್ದ ದಂಪತಿಗೆ ವಿಜಯನಗರದಲ್ಲಿ ಯಾರೋ ದಿನಸಿ ನೀಡುತ್ತಿದ್ದಾರೆ ಎಂದು ಹೇಳಿದ್ದರಂತೆ. ಅದಕ್ಕಾಗಿ ವಿಜಯನಗರ ಬಂದಿದ್ದರು.

ವಿಜಯನಗರ ಠಾಣೆ ಹತ್ತಿರ ಬಂದ ದಂಪತಿಯನ್ನು ಕಂಡ ಪಿಎಸ್ ಐ ಮನು ಅವರ ಕಷ್ಟದ ಕಥೆ ಕೇಳಿ ಮೂರ್ನಾಲ್ಕು ತಿಂಗಳಿಗಾಗುವಷ್ಟು ದಿನಸಿ, ದಿನನಿತ್ಯದ ಅಗತ್ಯ ಸಾಮಗ್ರಿಗಳು, ಮಕ್ಕಳಿಗೆ ಔಷದೋಪಚಾರಕ್ಕೆ ವಸ್ತುಗಳನ್ನು ಖರೀದಿಸಿ ನೀಡಿದ್ದಾರೆ.

SCROLL FOR NEXT