ರಾಜ್ಯ

ಬೆಂಗಳೂರು: ಟ್ರಯೇಜ್ ಸೆಂಟರ್ ನಿಂದಲೇ ಇನ್ನು ಮುಂದೆ ಬೆಡ್ ಕಾಯ್ದಿರಿಸಬಹುದು!

Manjula VN

ಬೆಂಗಳೂರು: ಕೊರೋನಾ ಸೋಂಕಿತರು ಇನ್ನು ಮುಂದೆ ಚಿಕಿತ್ಸಾ ಕೇಂದ್ರ (ಟ್ರಯೇಜ್ ಸೆಂಟರ್)ಗಳಿಂದಲೇ ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಯನ್ನು ನೇರವಾಗಿ ಕಾಯ್ದಿರಿಸಲು ಅನುಕೂಲವಾಗುವಂತೆ ಹೊಸ ತಂತ್ರಾಂಶವನ್ನು ಸಚಿವ ಅರವಿಂದ ಲಿಂಬಾವಳಿಯವರು ಗುರುವಾರ ಲೋಕಾರ್ಪಣೆ ಮಾಡಿದರು. 

ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ಹೊಸ ತಂತ್ರಾಂಶವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಆಸ್ಪತ್ರೆ ಮತ್ತು ಕೋವಿಡ್ ಆರೈಕೆ ಕೇಂದ್ರದಲ್ಲಿ ಹಾಸಿಗೆಯ ಹಂಚಿಕೆಗೆ ಪೂರ್ವಭಾವಿಯಾಗಿ ದೈಹಿಕ ಚಿಕಿತ್ಸೆಯ ಸರದಿ ನಿರ್ಧಾರವನ್ನು ನಿಧಾನವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಟೆಲಿ ಟ್ರಯೇಜಿಂಗ್ ನಲ್ಲಿ ರೋಗಿಗಳನ್ನು ಭೌತಿಕ ತಪಾಸಣೆಗೊಳಪಡಿಸುವ ಮೂಲಕ ಅವಲೋಕಿಸಿ, ಆಸ್ಪತ್ರೆಯಲ್ಲಿ ತುರ್ತಾಗಿ ಹಾಸಿಗೆ ವ್ಯವಸ್ಥೆ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ. 

ಬಿಬಿಎಂಪಿಯ ಕೋವಿಡ್ ಹಾಸ್ಪಿಟರ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂ (ಸಿಎಚ್‌ಬಿಎಂಎಸ್‌)ನ್ನು ಇದೀಗ ನವೀಕರಿಸಲಾಗಿದೆ ಮತ್ತು ವಿವರವಾದ ಭೌತಿಕ ಚಿಕಿತ್ಸೆಯ ಸರದಿ ನಿರ್ಧಾರ ಘಟಕವನ್ನು ಅಭಿವೃದ್ಧಿಪಡಿಸಲಾಗಿದೆ. ಸಿಎಚ್‌ಬಿಎಂಎಸ್‌ಯಲ್ಲಿ ಚಿಕಿತ್ಸೆಯ ಸರದಿ ನಿರ್ಧಾರ ಘಟಕವನ್ನು ಅಳವಡಿಸಲಾಗಿದೆ. ಇದನ್ನು ಎಂಟು ವಲಯಗಳ 16 ಚಿಕಿತ್ಸೆ ನಿರ್ಧಾರ ಕೇಂದ್ರಗಳಲ್ಲಿ ಬಳಸಬಹುದು. ಈ ಕೇಂದ್ರಗಳಿಗೆ ನೇರವಾಗಿ ಬರುವ ಕೊರೋನಾ ಸೋಂಕಿತರ ದೈಹಿಕ ತಪಾಸಣೆ ನಡೆಸಿ ಅಗತ್ಯ ಬಿದ್ದರೆ ಅಲ್ಲೇ ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸಲಾಗುತ್ತದೆ.

ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಈ ಕೇಂದ್ರಗಳಿಗೆ ಆಂಬುಲೆನ್ಸ್‌ಗಳನ್ನೂ ಒದಗಿಸಲಾಗಿದೆ. ಸೋಂಕಿತರು ಈ ಕೇಂದ್ರಗಳಿಗೆ ಬರಲು ಸಾಧ್ಯವಾಗದಿದ್ದರೆ ಆಂಬುಲೆನ್ಸ್‌ ಅವರು ಇರುವಲ್ಲಿಗೇ ಹೋಗಲಿದೆ. ಈ ಆಂಬುಲೆನ್ಸ್‌ಗಳನ್ನೇ ಚಿಕಿತ್ಸಾ ನಿರ್ಧಾರ ಘಟಕಗಳಂತೆ ಬಳಸಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಚಿಕಿತ್ಸಾ ನಿರ್ಧಾರ ಕೇಂದ್ರಗಳಲ್ಲಿ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಪಾಳಿಯಲ್ಲಿ ತಲಾ ಇಬ್ಬರು ವೈದ್ಯರು ಮತ್ತು ಇಬ್ಬರು ಅರೆವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಎಲ್ಲಾ ಕೇಂದ್ರಗಳನ್ನೂ ಆಮ್ಲಜನಕ ಪೂರೈಕೆ ಸೌಲಭ್ಯಗಳಿರುವ ಕೋವಿಡ್ ಆರೈಕೆ ಕೇಂದ್ರದ ಜೊತೆ ಜೋಡಿಸಲಾಗಿರುತ್ತದೆ. ಈ ಕೇಂದ್ರಗಳ ಮೂಲಕ ಹಾಸಿಗೆ ಕಾಯ್ದಿರಿಸಲು 26 ಆಸ್ಪತ್ರೆಗಳನ್ನು ಗೊತ್ತುಪಡಿಸಲಾಗಿದೆ’ ಎಂದು ತಿಳಿಸಿದರು.

‘ಹೊಸ ವ್ಯವಸ್ಥೆಯನ್ನು ಮೂರು ದಿನಗಳ ಕಾಲ ಪರೀಕ್ಷಿಸಲಾಗಿದೆ. ಇವುಗಳಲ್ಲಿ 936 ರೋಗಿಗಳನ್ನು ದೈಹಿಕ ತಪಾಸಣೆಗೆ ಒಳಪಡಿಸಲಾಗಿದೆ. 678 ರೋಗಿಗಳಿಗೆ ಮನೆಯಲ್ಲೇ ಪ್ರತ್ಯೇಕವಾಗಿದ್ದು ಆರೈಕೆಗೊಳಗಾಗುವಂತೆ ಸಲಹೆ ನೀಡಲಾಗಿದೆ. 186 ರೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಮತ್ತು 72 ರೋಗಿಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಎಚ್‌ಡಿಯು, ಐಸಿಯು ಘಟಕಗಳಲ್ಲಿ ದಾಖಲಿಸಲಾಗಿದೆ’ ಎಂದು ಅವರು ವಿವರ ನೀಡಿದರು.

SCROLL FOR NEXT