ರಾಜ್ಯ

ವೃತ್ತಿಪರ ಕೋರ್ಸ್‌ ಪ್ರವೇಶಕ್ಕೆ ಸಿಇಟಿ ಅಂಕ ಮಾತ್ರ ಪರಿಗಣಿಸಿ: ಸಚಿವ ಅಶ್ವಥ್‌ ನಾರಾಯಣಗೆ ಸುರೇಶ್‌ ಕುಮಾರ್‌ ಮನವಿ

Srinivas Rao BV

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಿರುವುದರಿಂದ ವೃತ್ತಿಪರ ಕೋರ್ಸ್‌ ಗಳ ಪ್ರವೇಶಕ್ಕೆ ಸಿ ಇ ಟಿ ಅಂಕಗಳನ್ನು ಮಾತ್ರ ಪರಿಗಣಿಸುವಂತೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ಉನ್ನತ ಶಿಕ್ಷಣ ಸಚಿವ ಅಶ್ವಥ್‌ ನಾರಾಯಣ ಅವರಿಗೆ ಶನಿವಾರ ಮನವಿ ಮಾಡಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯ ತೀವ್ರತೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಸುರಕ್ಷತೆಯನ್ನು ಖಾತರಿಪಡಿಸಲು ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಿರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಶ್ವಥ್‌ ನಾರಾಯಣ ಅವರಿಗೆ ಬರೆದಿರುವ ಪತ್ರದಲ್ಲಿ ಸುರೇಶ್‌ ಕುಮಾರ್‌ ವಿವರಿಸಿದ್ದಾರೆ.

ನಿರ್ದಿಷ್ಟ ಮಾರ್ಗಸೂಚಿ ಅನುಸರಿಸಿ ಪರೀಕ್ಷೆ ನಡೆಸದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ, ಈ ವಿದ್ಯಾರ್ಥಿಗಳ ಪ್ರಥಮ ಪಿಯುಸಿ ಹಾಗೂ ಎಸ್‌ ಎಸ್‌ ಎಲ್‌ ಸಿ ಫಲಿತಾಂಶಗಳನ್ನು ಪರಿಶೀಲಿಸಿ ಅವರಿಗೆ ಗ್ರೇಡಿಂಗ್‌ ನೀಡಲು ನಿರ್ಧರಿಸಿದ್ದೇವೆ. ಒಂದೊಮ್ಮೆ ಯಾವುದೇ ವಿದ್ಯಾರ್ಥಿಗೆ ಗ್ರೇಡಿಂಗ್‌ ತೃಪ್ತಿ ತರದಿದ್ದರೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಈಗಾಗಲೇ ನಾವು ಪ್ರಕಟಿಸಿದ್ದೇವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಸಾಮಾನ್ಯವಾಗಿ ಸಿ ಇಟಿ ಪರೀಕ್ಷೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಅಂಕಗಳನ್ನು ಪರಿಗಣಿಸಿ, ಸೂಕ್ತ ವೇಯಿಟೇಜ್‌ ನೀಡಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಭಾರಿಯ ಗ್ರೇಡಿಂಗ್‌ ಫಲಿತಾಂಶ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯ ಬಗ್ಗೆ ಖಚಿತವಾಗಿದ್ದರೂ, ಮತ್ತೊಂದು ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ಕಲ್ಪಿಸುತ್ತಿದೆ. ಈ ಭಾರಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಿ ಇಟಿ ಪರೀಕ್ಷೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳಿಗೂ ಇದು ಉಪಯುಕ್ತವಾಗಬಹುದು ಎಂದು ಪತ್ರದಲ್ಲಿ ಹೇಳಿದ್ದಾರೆ.

SCROLL FOR NEXT