ರಾಜ್ಯ

ಬಿಎಂಟಿಸಿ ದರ ಏರಿಕೆ ಸದ್ಯಕ್ಕೆ ಇಲ್ಲ: ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟನೆ

Manjula VN

ಬೆಂಗಳೂರು: ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಸಾರಿಗೆ ಇಲಾಖೆ ನಷ್ಟ ಭರಿಸಲು ಬಿಎಂಟಿಸಿ ಬಸ್ ಟಿಕೇಟ್ ದರ ಏರಿಸಲಿದೆ ಎಂಬ ಪ್ರಯಾಣಿಕರ ಆತಂಕಕ್ಕೆ ಉಪಮುಖ್ಯಮಂತ್ರಿಗಳೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತೆರೆ ಎಳೆದಿದ್ದು, ಬಿಎಂಟಿಸಿ ದರ ಹೆಚ್ಚಳವಿಲ್ಲವೆಂಬುದನ್ನು ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಲಕ್ಷ್ಮಣ ಸವದಿಯವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. 

ಬಿಎಂಟಿಸಿ ದರ ಹೆಚ್ಚಾಗಲಿದೆ ಎಂಬ ಸುದ್ದಿ ಹರಡುತ್ತಿದೆ. ಇಲಾಖೆಯಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ಒಟ್ಟು ನಾಲ್ಕು ನಿಗಮಗಳಿವೆ. ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಿಗೆ ಮಾಡುವುದಿಲ್ಲ. ಈಗಾಗಲೇ ಬಡವರು‌ ಮೊದಲೇ ಬಿಎಂಟಿಸಿಯಲ್ಲಿ ಕಷ್ಟದಿಂದ ಸಂಚರಿಸುತ್ತಿದ್ದಾರೆ‌. ಇಂತಹ ಸಂದರ್ಭದಲ್ಲಿ ಅವರಿಗೆ ಮತ್ತೆ ಕಷ್ಟ ಕೊಡಲು ಹೋಗುವುದಿಲ್ಲ. ಅಧಿಕಾರಿಗಳು ಪ್ರಸ್ತಾವನೆ ಕೊಟ್ಟಿದ್ದಾರೆ. ಮುಂದೆ ನೋಡೋಣ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಜೂನ್ 14ರ ನಂತರ ಲಾಕ್​​ಡೌನ್ ಸಡಿಲ ಮಾಡಿದರೆ ಹಂತ ಹಂತವಾಗಿ ಸಾರಿಗೆ ಸೇವೆ ಪ್ರಾರಂಭ ಮಾಡುತ್ತೇವೆ. ಪ್ರಯಾಣಿಕರ ಅಂತರ ಕಾಯ್ದುಕೊಂಡು, ಅವರಿಗೆ ಸ್ಯಾನಿಟೈಸರ್, ಮಾಸ್ಕ್ ಎಲ್ಲವನ್ನು ನೀಡುತ್ತೇವೆ. ಎರಡೂ ಡೋಸ್ ಆಗುವವರೆಗೂ ನಮ್ಮ ನೌಕರರಿಗೆ ಒತ್ತಡ ಹಾಕಲ್ಲ. ಎರಡನೇ ಡೋಸ್ ತೆಗೆದುಕೊಂಡವರಿಗೆ ರಕ್ಷಣೆ ಕೊಟ್ಟು, ಸಾರಿಗೆ ವ್ಯವಸ್ಥೆ ಪ್ರಾರಂಭ ಮಾಡುತ್ತೇವೆ ಎಂದು ಸವದಿ ತಿಳಿಸಿದ್ದಾರೆ.

SCROLL FOR NEXT