ರಾಜ್ಯ

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಕಳ್ಳಾಟ: ಕರ್ತವ್ಯದ ವೇಳೆ ಅನಧಿಕೃತ ಗೈರು; ಜಿಯೋ ಫೆನ್ಸಿಂಗ್ ಅಳವಡಿಕೆಗೆ ಚಿಂತನೆ!

Shilpa D

ಹುಬ್ಬಳ್ಳಿ: ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಕರ್ತವ್ಯದ ವೇಳೆ ಅನಧಿಕೃತ ಗೈರು ಹಾಜರಾಗುವುದನ್ನು ತಡೆಯಲು ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಜಿಯೋ ಫೆನ್ಸಿಂಗ್‌ ತಂತ್ರಜ್ಞಾನ ಅಳವಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ. 

ಬುಧವಾರ ಮಾತನಾಡಿದ ಸಚಿವ ಸುಧಾಕರ್, ಇತ್ತೀಚೆಗೆ ಹುಬ್ಬಳ್ಳಿ ಕಿಮ್ಸ್‌ಗೆ ಭೇಟಿ ನೀಡಿದ್ದಾಗ ವೈದ್ಯರ ಗೈರು ಹಾಜರಿ ಬಗ್ಗೆ ಬೇರೆ ಸಚಿವರು ದೂರು ನೀಡಿದ್ದರು. ಆಗ ಸ್ಥಳದಲ್ಲೇ ತನಿಖೆಗೆ ಆದೇಶಿಸಿ ವರದಿ ನೀಡಲು ಸೂಚಿಸಿದ್ದೆ. ವರದಿ ನನ್ನ ಬಳಿ ವರದಿ ಬಂದ ಕೂಡಲೇ ಈ ಬಗ್ಗೆ ಗಂಭೀರ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಅನಧಿಕೃತ ಗೈರು ಹಾಜರಿಯನ್ನು ತಪ್ಪಿಸುವ ವೈದ್ಯರು ಆಸ್ಪತ್ರೆಯಿಂದ ಹೊರಗೆ 100 ಮೀಟರ್‌ ದೂರ ಹೋದ ಕೂಡಲೇ ಗೊತ್ತಾಗುವಂತೆ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಜಿಯೋ ಫೆನ್ಸಿಂಗ್‌ ತಂತ್ರಜ್ಞಾನ ಅಳವಡಿಸಲಾಗುವುದು. ಅಲ್ಲದೆ, ಪ್ರತಿ ಆಸ್ಪತ್ರೆಯ ವಾರ್ಡ್‌, ಐಸಿಯುನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಒಂದೇ ಕಡೆ ನಿರ್ವಹಣೆ ಮಾಡುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.

ಖಾಸಗಿ ಚಾನೆಲ್ ನ ರಹಸ್ಯ ಕಾರ್ಯಾಚರಣೆ ಒಳ್ಳೆಯ ಕೆಲಸವಾಗಿದೆ. ಕೆಲಸಗಳ್ಳ ವೈದ್ಯರ ಬಗ್ಗೆ ನನಗೆ ಮೊದಲೇ ಮಾಹಿತಿ ಇತ್ತು. ಜಿಲ್ಲೆಯ ಸಚಿವರು ನನಗೆ ವೈದ್ಯರ ಬಗ್ಗೆ ದೂರು ನೀಡಿದ್ದರು. ಅಲ್ಲಿಯೇ ಅವರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ್ದೆವು. ವರದಿ ನೀಡುವಂತೆ ನಿರ್ದೇಶಕರಿಗೆ ಸೂಚನೆ ನೀಡಿದ್ದೆ. ಕಿಮ್ಸ್ ನಿರ್ದೇಶಕರ ವರದಿ ನಿನ್ನೆಯೇ ಬಂದಿರಬೇಕು. ಕಚೇರಿಗೆ ತೆರಳಿ ವರದಿ ಬಂದ ಬಳಿಕ ಕ್ರಮಕೈಗೊಳ್ಳುತ್ತೇವೆ. ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.
 
ಈ ಸಂಬಂಧ, ವೈದ್ಯರಿಗೂ ಟ್ಯಾಗ್ ಅಳವಡಿಸುವುದಕ್ಕೆ ಚಿಂತನೆ ನಡೆಸಲಾಗಿದೆ. ಆ ಮೂಲಕ ವೈದ್ಯರಿಗೆ ಜಿಯೋ ಫೆನ್ಸಿಂಗ್ ಅಳವಡಿಸಲಾಗುವುದು. ಅದರಿಂದ ವೈದ್ಯರು 100 ಮೀಟರ್‌ಗಿಂತ ದೂರ ಹೋದ್ರೆ ತಿಳಿಯುತ್ತೆ. ತಪ್ಪಿತಸ್ಥ ವೈದ್ಯರ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳುತ್ತೇವೆ. ಕ್ರಮ ಕೈಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ವಾರ್ಡ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸೂಚನೆ ಕೊಡಲಾಗಿದೆ. ಕೆಲಸಗಳ್ಳ ವೈದ್ಯರು, ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಟಿವಿ9ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

SCROLL FOR NEXT