ರಾಜ್ಯ

ಪೊಲೀಸರ ಹಲ್ಲೆಯಿಂದ ಗಾಯ: ಮಡಿಕೇರಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ!

Nagaraja AB

ಮಡಿಕೇರಿ: ಪೊಲೀಸರ ಹಲ್ಲೆಯಿಂದ ಆಂತರಿಕ ಅಂಗಾಂಗಳಿಗೆ ಹಾನಿಯಾಗಿದೆ ಎಂಬುದು ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರ ಮರಣೋತ್ತರ ಪರೀಕ್ಷೆಯಿಂದ ಬಹಿರಂಗವಾಗಿದೆ. ಕುಟುಂಬ ಸದಸ್ಯರು, ಮೂವರು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳೊಂದಿಗೆ ವರದಿಯನ್ನು ಸಿಐಡಿ ತಂಡಕ್ಕೆ ವರ್ಗಾವಣೆ ಮಾಡಲಾಗಿದೆ.

ವಿರಾಜಪೇಟೆಯ ರಾಯ್ ಡಿಸೋಜಾ (50) ಟೌನ್ ಠಾಣೆಯ ಪೊಲೀಸರ ಹಲ್ಲೆಯಿಂದ ಮೃತಪಟ್ಟ ದುರ್ದೈವಿ. ಮಡಿಕೇರಿ ಆಸ್ಪತ್ರೆಯಲ್ಲಿ ಶುಕ್ರವಾರ ಆತ ಮೃತಪಟ್ಟಿದ್ದು, ಇಂದು ಮರಣೋತ್ತರ ಪರೀಕ್ಷೆ ವರದಿ ಬಂದಿದೆ.

ಮೃತನ ಆಂತರಿಕ ಅಂಗಾಂಗಳು ಹಾನಿಯಾಗಿವೆ, ಕಣ್ಣು, ಎದೆ, ತೊಡೆ ಮತ್ತು ಕಾಲುಗಳಿಗೆ ಗಂಭೀರ ರೀತಿಯ ಮೂಗೇಟು ಗಳಾಗಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿರುವುದಾಗಿ ಮೂಲಗಳು ಖಚಿತಪಡಿಸಿವೆ. ಮಡಿಕೇರಿ ತಹಸೀಲ್ದಾರ್ ಮಹೇಶ್ ಸಮ್ಮುಖದಲ್ಲಿ ಇಬ್ಬರು ವೈದ್ಯರೊಂದಿಗೆ ಶನಿವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

ಮೃತನ ಕುಟುಂಬ ಸದಸ್ಯರು ಹಾಗೂ ಮೂವರು ಪ್ರತ್ಯೇಕ್ಷದರ್ಶಿಗಳ ಹೇಳಿಕೆಗಳೊಂದಿಗೆ ಮರಣೋತ್ತರ ಪರೀಕ್ಷೆ ವರದಿಯನ್ನು ಸಿಐಡಿಗೆ ಸಲ್ಲಿಸಲಾಗಿದೆ ಎಂದು ಮಹೇಶ್ ಖಚಿತಪಡಿಸಿದ್ದಾರೆ. ಮೃತನ ದೇಹದ ಮೇಲೆ ಗಂಭೀರ ರೀತಿಯ ಗಾಯಗಳು ಕಂಡುಬಂದಿರುವುದಾಗಿ ಮೂಲಗಳು ಬಹಿರಂಗಪಡಿಸಿದ್ದು, ಪೊಲೀಸರ ಹಲ್ಲೆಯೇ ಇದಕ್ಕೆ ಕಾರಣ ಎಂದು ಅನುಮಾನಿಸಲಾಗಿದೆ. 

ಕೈಯಲ್ಲಿ  ಲಾಂಗ್ ಹಿಡಿದು ಬೀದಿಗಳಲ್ಲಿ ಓಡಾಡುತ್ತಿದದ್ದು ಕಂಡುಬಂದ ನಂತರ  ಶುಕ್ರವಾರ ಮುಂಜಾನೆ ವಿರಾಜ್ ಪೇಟೆ ಪೊಲೀಸರು ರಾಯ್ ನನ್ನು ವಶಕ್ಕೆ ಪಡೆದುಕೊಂಡಿದ್ದರು. ಮಧ್ಯರಾತ್ರಿಯಲ್ಲಿ ಪೊಲೀಸರ ಮೇಲೆ ರಾಯ್ ದಾಳಿ ಮಾಡಿದ್ದ ಎಂದು ಕೂಡಾ ಹೇಳಲಾಗುತ್ತಿದೆ.

ಆದಾಗ್ಯೂ, ರಾಯ್ ಗೆ ವಿರಾಜ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಿಗ್ಗಾಮುಗ್ಗಾ ಥಳಿಸಲಾಗಿದೆ,ಶುಕ್ರವಾರ ಆತ ಮೃತಪಟ್ಟಿದ್ದು, ನಂತರ ಕುಟುಂಬಕ್ಕೆ ಆತನನ್ನು ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

SCROLL FOR NEXT