ಬೆಂಗಳೂರು: ಬೆಂಗಳೂರಿನ ಹಾಸ್ಟೆಲ್ ಮತ್ತು ಪಿಜಿ ಮಾಲೀಕರು, ವಿದ್ಯಾರ್ಥಿಗಳಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದ್ದು, ಪಿಜಿಗಳಲ್ಲಿರುವ ವಿದ್ಯಾರ್ಥಿಗಳನ್ನು ಮನೆಗೆ ತೆರಳುವಂತೆ ಬಿಬಿಎಂಪಿ ಸೂಚಿಸಿದೆ.
ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೂಚನಾ ಪತ್ರ ಹೊರಡಿಸಿದ್ದು, ಕಾಲೇಜುಗಳು ರಜೆ ಇರುವ ವಿದ್ಯಾರ್ಥಿಗಳು ಪಿಜಿಯಲ್ಲಿ ಇರಲು ಅವಕಾಶ ಇಲ್ಲ ಎಂದಿದ್ದಾರೆ.
ಒಂದು ವೇಳೆ ಅನಿವಾರ್ಯ ಕಾರಣಗಳಿಗಿಂದಾಗಿ ವಿದ್ಯಾರ್ಥಿಗಳನ್ನು ಪಿಜಿಯಲ್ಲಿ ಉಳಿಸಿಕೊಂಡಲ್ಲಿ ಪಿಜಿಯಲ್ಲಿ ವೈಯಕ್ತಿಕ ಆರೋಗ್ಯ ಮತ್ತು ಸ್ವಚ್ಛತೆಯ ಜವಾಬ್ದಾರಿ ಅವರದ್ದೇ ಆಗಿರುತ್ತದೆ. 110 ಚದುರ ಅಡಿಯ ಕೊಠಡಿಯಲ್ಲಿ ಇಬ್ಬರಿಗಿಂತ ಹೆಚ್ಚು ಜನರಿಗೆ ಅವಕಾಶವಿಲ್ಲ. ಪಿಜಿಯ ಸ್ವಚ್ಛತೆಯ ಹೊಣೆಯನ್ನು ಪಿಜಿ ಮಾಲೀಕರೇ ಹೊರಬೇಕು.
ಪಿಜಿ ವಾಸಿಗಳನ್ನು ಯಾವುದೇ ಮುನ್ಸೂಚನೆ ಇಲ್ಲದ ದಿಢೀರ್ ಎಂದು ಹೊರ ಹಾಕುವಂತಿಲ್ಲ. ಪಿಜಿ ಮಾಲೀಕರ ನಿರ್ಲಕ್ಷ್ಯದಿಂದ ಕೋವಿಡ್ ಹರಡುವಿಕೆ ಕಂಡಲ್ಲಿ ಕಠಿಣ ಕ್ರಮ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.