ರಾಜ್ಯ

ಫಲಿತಾಂಶ ನಿರ್ಣಯಕ್ಕೆ ಎಸ್ಎಟಿಎಸ್ ಪೋರ್ಟಲ್'ನಲ್ಲಿ ನಮೂದಿಸಿದ್ದ ಪಿಯುಸಿ, ಎಸ್ಎಸ್ಎಲ್'ಸಿ ಅಂಕವೇ ಮಾಯ!

Manjula VN

ಬೆಂಗಳೂರು: ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ’ (ಎಸ್ಎಟಿಎಸ್) ಪೋರ್ಟಲ್‌ನಲ್ಲಿ ನಮೂದಿಸಿದ್ದ, ಪ್ರಥಮ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಅಂಕಗಳೇ ಮಾಯವಾಗಿವೆ!

ಪ್ರಥಮ ಪಿಯುಸಿ ಮತ್ತು ಎಸ್ಎಸ್ಎಲ್'ಸಿಯಲ್ಲಿ ಪಡೆದ ಅಂಕಗಳನ್ನು ಈ ಪೋರ್ಟಲ್‌ನಲ್ಲಿ ನಮೂದಿಸುವಂತೆ ಇದೇ 7ರಂದು ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ವಾರದ ಒಳಗೆ ಈ ಕೆಲಸವನ್ನು ಪೂರ್ಣಗೊಳಿಸಬೇಕೆಂದು ಪ್ರಾಂಶುಪಾಲರಿಗೆ ಸೂಚಿಸಲಾಗಿತ್ತು.

ರಾಜ್ಯದಾದ್ಯಂತ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಈ ಕೆಲಸವನ್ನು ಬಹುತೇಕ ಪೂರ್ಣಗೊಳಿಸಿದ್ದರು. 

ಅಂಕಗಳು ಸಂಪೂರ್ಣ ಅಳಿಸಿ ಹೋಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಇಲಾಖೆಯ ನಿರ್ದೇಶಕಿ ಸ್ನೇಹಲ್‌ ಅವರು ಶನಿವಾರ ಮಧ್ಯಾಹ್ನ ಝೂಮ್‌ ತಂತ್ರಾಂಶದ ಮೂಲಕ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರ ತುರ್ತು ಸಭೆ ನಡೆಸಿ, ಅಂಕಗಳನ್ನು ಮತ್ತೆ ನಮೂದಿಸುವಂತೆ ಸೂಚಿಸಿದ್ದಾರೆ. 

ಇದರ ಬೆನ್ನಲ್ಲೇ, ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು, ಅಂಕಗಳನ್ನು ಮತ್ತೆ ನಮೂದಿಸಿ ಪರಿಶೀಲನಾ ಪಟ್ಟಿ ತಯಾರಿಸುವಂತೆ ತಮ್ಮ ವ್ಯಾಪ್ತಿಯ ಕಾಲೇಜುಗಳ ಪ್ರಾಂಶುಪಾಲರಿಗೆ ವಾಟ್ಸ್ಆ್ಯಪ್‌ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಅಂಕಗಳನ್ನು ನಮೂದಿಸಿ ಪರಿಶೀಲನಾ ಪಟ್ಟಿಯನ್ನು (ಚೆಕ್‌ಲಿಸ್ಟ್) ಡೌನ್‌ಲೋಡ್‌ ಮಾಡಿಕೊಂಡಿರುವ ಪ್ರಾಂಶುಪಾಲರು, ಮತ್ತೊಮ್ಮೆ ಅಂಕಗಳನ್ನು ನಮೂದಿಸಿ, ಚೆಕ್‌ಲಿಸ್ಟ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಬಳಿಕ ದಾಖಲೆಗಳನ್ನು ಪರಿಶೀಲಿಸಿ ಅನುಮೋದನೆಗೆ ಸಲ್ಲಿಸಬೇಕು. ಈಗಾಗಲೇ ಡೌನ್‌ಲೋಡ್‌ ಮಾಡಿಕೊಂಡಿರುವ ಚೆಕ್‌ಲಿಸ್ಟ್‌ ತೆಗೆದುಕೊಂಡು ಬಂದರೆ ಅದಕ್ಕೆ ಅನುಮೋದನೆ ಕೊಡಲು ಸಾಧ್ಯವಿಲ್ಲ. ಇದರಲ್ಲಿ ಲೋಪಗಳಾದರೆ ಆಯಾ ಕಾಲೇಜುಗಳ ಪ್ರಾಂಶುಪಾಲರೇ ಹೊಣೆ’ ಎಂದು ಉಪ ನಿರ್ದೇಶಕರು ಸಂದೇಶದಲ್ಲಿ ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹಲವು ಪ್ರಾಂಶುಪಾಲರು ಅಸಮಾಧಾನ ವ್ಯಕ್ತಪಡಿಸಿದ್ದು, ಮತ್ತೆ ಅಂಕ ನಮೂದಿಸಲು ತರಾತುರಿಯಲ್ಲಿ ಮತ್ತು ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಇದರಿಂದ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಕರಾವಳಿ, ಮಲೆನಾಡು ಭಾಗದಲ್ಲಿ ತೀವ್ರ ಮಳೆ ಮತ್ತು ವಿದ್ಯುತ್ ವ್ಯತ್ಯಯದ ಕಾರಣ ಸಕಾಲದಲ್ಲಿ ಅಂಕ ನಮೂದಿಸಲು ಸಮಸ್ಯೆ ಆಗುತ್ತಿದೆ. ಅಲ್ಲದೆ, ಸಿಬಿಎಸ್‌ಇ ಹಾಗೂ ಇತರ ರಾಜ್ಯಗಳ 10ನೇ ತರಗತಿಯ ಅಂಕಗಳನ್ನು ನಮೂದಿಸುವ ಬಗ್ಗೆ ಗೊಂದಲಗಳಿವೆ. ಆದ್ದರಿಂದ, ಅಂಕ ನಮೂದಿಸಲು ನಿಗದಿಪಡಿಸಿದ ಕಾಲಾವಧಿ ವಿಸ್ತರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. 

ಸರ್ವರ್ ಬಿಝಿ ಇರುತ್ತದೆ. ಶಾಲಾ ಅವಧಿಯಲ್ಲಿ ಎಸ್‌ಎಟಿಎಸ್ ಪೋರ್ಟಲ್‌ನಲ್ಲಿ ಡೇಟಾವನ್ನು ಅಪ್‌ಲೋಡ್ ಮಾಡುತ್ತಿದ್ದರೆ ಇಡೀ ದಿನ ವ್ಯರ್ಥವಾಗುತ್ತದೆ ಎಂದು ಖಾಸಗಿ ಶಾಲೆಗಳು ಮತ್ತು ಮಕ್ಕಳ ಕಲ್ಯಾಣ ಸಂಘದ ರಾಜ್ಯ ಕಾರ್ಯದರ್ಶಿ ಆಯಿಷಾ ಅವರು ಹೇಳಿದ್ದಾರೆ. 

ಪಿಯುಸಿ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗೇಗೌಡ ಮಾತನಾಡಿ, ನಾಲ್ಕು ದಿನಗಳಿಂದ ಈ ದೋಷ ಕಂಡು ಬಂದಿತ್ತು, ಈಗಾಗಲೇ ನಮೂದಿಸಿದ್ದ ಫಲಿತಾಂಶ ಕಣ್ಮರೆಯಾಗಿದೆ ಎಂದು ತಿಳಿಸಿದ್ದಾರೆ.

SCROLL FOR NEXT