ರಾಜ್ಯ

ಅನ್'ಲಾಕ್ ಬೆನ್ನಲ್ಲೇ ನಗರದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಶುರು: ಮಾರುಕಟ್ಟೆಗಳಲ್ಲಿ ಜನವೋ ಜನ!

Manjula VN

ಬೆಂಗಳೂರು: ರಾಜಧಾನಿಯಲ್ಲಿ ಸೋಮವಾರ ಲಾಕ್ಡೌನ್ ಸಡಿಲಿಸಿದ ಬೆನ್ನಲ್ಲೇ ವ್ಯಾಪಾರ-ವಹಿವಾಟು ಬಿರುಸಾಗುವ ಜೊತೆಗೆ ಕೈಗಾರಿಕೆಗಳ ಚಟುವಟಿಕೆ ಆರಂಭಗೊಂಡ ಪರಿಣಾಮ ಬಹುತೇಕ ಕಡೆ ಜನ ಹಾಗೂ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. 

ಕೈಗಾರಿಕೆಗಳು, ಗಾರ್ಮೆಂಟ್ಸ್ ಗಳಲ್ಲಿ ಕ್ರಮವಾಗಿ ಶೇ.50 ಹಾಗೂ ಶೇ.30ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ಬೆಳಿಗ್ಗೆಯೇ ನಗರದ ಪೀಣ್ಯ, ಯಶವಂತಪುರ, ಜೆಸಿ. ಕೈಗಾರಿಕಾ ಪ್ರದೇಶ ಸೇರಿದಂತೆ ಇತರೆ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರ ಸಂಚಾರ ದಟ್ಟಣೆ ಹೆಚ್ಚಾಗಿತ್ತು. 

ಟೋಲ್ ಪ್ಲಾಜಾ, ಚೆಕ್ ಪೋಸ್ಟ್, ತುಮಕೂರು, ಮೈಸೂರು ರಸ್ತೆ, ಅತ್ತಿಬೆಲೆ, ಹಳೇ ಮದ್ರಾಸ್ ರಸ್ತೆಗಳ ಪ್ರವೇಶ ಭಾಗದಲ್ಲಿ ಭಾರೀ ಸಂಚಾರ ದಟ್ಟಣೆಗಳು ಕಂಡು ಬಂದಿದ್ದವು. 

ಸುಮಾರು ಒಂದುವರೆ ತಿಂಗಳಿಂದ ಮನೆಗಳಲ್ಲೇ ಕಾಲ ಕಳೆದಿದ್ದ ಕಾರ್ಮಿಕರು ಉತ್ಸಾಹದಿಂದ ಕೆಲಸಕ್ಕೆ ತೆರಳಿದರು. ಕಟ್ಟಣ ನಿರ್ಮಾಣ ಕೆಲಸಕ್ಕೆ ತೆರಳುವ ಕಾರ್ಮಿಕರು ನಗರದ ಪ್ರಮುಖ ರಸ್ತೆ, ಜಂಕ್ಷನ್ ವೃತ್ತಗಳಲ್ಲಿ ಕಂಡು ಬಂದರು.

ಇನ್ನು ಹೋಟೆಲ್, ಉಪಹಾರ ಮಂದಿರ, ದರ್ಶಿನಿಗಳಲ್ಲಿ ಎಂದಿಗಿಂತ ಗ್ರಾಹಕರ ಸಂಖ್ಯೆ ತುಸು ಹೆಚ್ಚಿತ್ತು. ಕೇವಲ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ನೀಡಿದ್ದರೂ ಹಲವು ಕಡೆ ಅಲ್ಲಿಯೇ ತಿಂಡಿ-ಊಟ ಸೇವನೆಗೆ ಅವಕಾಶ ನೀಡಲಾಗಿತ್ತು. ಕೆಲವರು ಉಪಯೋಗಿಸಿ ಎಸೆಯುವ ತಟ್ಟೆಗಳನ್ನು ಹಿಡಿದು ಹೋಟೆಲ್ ಸುತ್ತಮುತ್ತಲ ಅಂಗಡಿ-ಮುಗ್ಗಟ್ಟುಗಳ ಎದುರು ಕುಳಿತು ಊಟ-ತಿಂಡಿ ಸೇವಿಸುತ್ತಿರುವುದು ಕಂಡು ಬಂದವು. ಇನ್ನು ಬೆಳಿಗ್ಗೆ ವಾಕಿಂಗ್ ಮುಗಿಸಿಕೊಂಡು ಗುಂಪು ಗುಂಪಾಗಿ ಹೋಟೆಲ್'ಗಳಿಗೆ ಬಂದಿದ್ದ ಜನರು, ದೈಹಿಕ ಅಂತರ ಕಾಪಾಡಿಕೊಳ್ಳದೇ ಕಾಫಿ-ಟೀ ಸೇವಿಸುವುದು ಸಾಮಾನ್ಯವಾಗಿತ್ತು. 

ಇನ್ನು ಅಗತ್ಯ ವಸ್ತುಗಳು ದಿನಸಿ, ಅಂಗಡಿಗಳಿಗೆ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರಕ್ಕೆ ಅವಕಾಶ ನೀಡಿದ್ದರಿಂದ ಬೆಳಿಗ್ಗೆಯಿಂದಲೇ ವ್ಯಾಪಾರ ಭರ್ಜರಿಯಾಗಿತ್ತು. 

ಅಂಗಡಿ-ಮುಂಗಟ್ಟುಗಳ ಎದುರು ಗ್ರಾಹಕರ ದಟ್ಟಣೆ ಹೆಚ್ಚಾಗಿತ್ತು. ಕೆ.ಆರ್.ಮಾರುಕಟ್ಟೆ ಪ್ರದೇಶ, ಯಶವಂತಪುರ, ಯಲಹಂಕ, ಕೆ.ಆರ್.ಪುರಂ, ಬ್ಯಾಟರಾಯನಪುರ ಸೇರಿ ಬಹುತೇಕ ವ್ಯಾಪಾರ ಸ್ಥಳಗಳಲ್ಲಿ ಜನರು ಕೊರೋನಾ ನಿಯಮ ಲೆಕ್ಕಿಸದೇ ಜನರು ಖರೀದಿಗೆ ಮುಗಿಬಿದ್ದರು. ಜಾತ್ರೆ ಮಾದರಿಯಲ್ಲಿ ಜನ ನೆರೆದಿದ್ದರು. ಮಧ್ಯಾಹ್ನದವರೆಗೂ ವ್ಯಾಪಾರ ಬಿರುಸುಗೊಂಡಿತ್ತು. 

ಸರ್ಕಾರಿ ಸಿಬ್ಬಂದಿಗಳು ಹಾಗೂ ಖಾಸಗಿ ಕಂಪನಿಗಳು ನೌಕರರು ಕೆಲಸಕ್ಕೆ ಹೋಗುವ ಹಿನ್ನೆಲೆಯಲ್ಲಿ ನಗರದಲ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಎದುರಾಗಿತ್ತು. ಹೀಗಾಗಿ ಪರಿಸ್ಥಿತಿ ನಿಭಾಯಿಸಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಒಬ್ಬರು ಮಾಹಿತಿ ನೀಡಿದ್ದಾರೆ. 

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು ಮಾತನಾಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಇಲ್ಲದ ಕಾರಣ ಜನರು ತಮ್ಮದೇ ವಾಹನಗಳಲ್ಲಿ ರಸ್ತೆಗಿಳಿದಿದ್ದರು. ಹೀಗಾಗಿ ಸಂಚಾರ ದಟ್ಟಣೆ ಎದುರಾಗಿತ್ತು ಎಂದು ಹೇಳಿದ್ದಾರೆ. 

ಆಶ್ಚರ್ಯಕರ ವಿಚಾರ ಎಂದರೆ ಅನ್ ಲಾಕ್ ಮೊದಲನೇ ಹಂತದಲ್ಲಿ ಸಲೂನ್, ಬ್ಯೂಟಿ ಪಾರ್ಲರ್, ಮಿನಿ ಮಾಲ್ ಗಳು, ಫುಟ್ ವೇರ್, ಗಾರ್ಮೆಂಟ್ಸ್ ಗಳೂ ಕೂಡ ಆರಂಭವಾಗಿರುವುದು ಕಂಡು ಬಂದಿತ್ತು. 

SCROLL FOR NEXT