ರಾಜ್ಯ

ಬೆಂಗಳೂರು: ಪ್ರಿಯತಮನಿಗಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆಂಧ್ರ ಮೂಲದ ಯುವತಿ ಬಂಧನ

Raghavendra Adiga

ಬೆಂಗಳೂರು: ಪೋಷಕರಿಂದ ದೂರವಿದ್ದು ಪ್ರಿಯತಮನಿಗಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆಂಧ್ರ ಪ್ರದೇಶ ಮೂಲದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಪ್ರದೇಶ ಮೂಲದ ಶ್ರೀಕಾಕುಳಂನ ನಿವಾಸಿ ರೇಣುಕಾ(25) ಬಂಧಿತ ಆರೋಪಿತೆ.

ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಆಕೆ ಗಾಂಜಾ ಪೂರೈಕೆ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. 

ಆರೋಪಿ ರೇಣುಕಾ ಚೈನ್ನೈನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಕಡಪದ ಸಿದ್ದಾರ್ಥ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ಇವರಿಬ್ಬರ ಪ್ರೀತಿಗೆ ಪೋಷಕರ ವಿರೋಧವಿತ್ತು. ಇದೇ ವಿಚಾರಕ್ಕೆ ರೇಣುಕಾ ಮನೆಯವರನ್ನು ತೊರೆದಿದ್ದಳು ಎನ್ನಲಾಗಿದೆ.

ಪ್ರಿಯತಮ ಸಿದ್ಧಾರ್ಥ ಬಿಹಾರ ಮೂಲದ ಸುಧಾಂಶುನನ್ನು ರೇಣುಕಾಗೆ ಪರಿಚಯ ಮಾಡಿಕೊಟ್ಟಿದ್ದ. ಸುಧಾಂಶುನಿಗೆ ನಗರದ ಡ್ರಗ್ಸ್ ವ್ಯವಹಾರದ ಮಾಹಿತಿ ಇತ್ತು. ಐಷಾರಾಮಿ ಜೀವನಕ್ಕಾಗಿ ಪ್ರಿಯತಮನ ಮಾತು ಕೇಳಿ ಲಾಕ್ ಡೌನ್ ನಲ್ಲಿ ಬೆಂಗಳೂರಿಗೆ ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಪೊಲೀಸರ ಎದುರು ಆರೋಪಿತೆ ತಪ್ಪೊಪ್ಪಿಕೊಂಡಿದ್ದಾಳೆ.

ಒಡಿಶಾ ಹಾಗೂ ವಿಶಾಖಪಟ್ಟಣದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದ ಸಿದ್ದಾರ್ಥ್​, ಅದನ್ನು ರೇಣುಕಾಗೆ ಕಳುಹಿಸುತ್ತಿದ್ದ. 50 ಗ್ರಾಂ. ಗಾಂಜಾ 2 ರಿಂದ 3 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿರುವುದಾಗಿ ಪೊಲೀಸರ ಮುಂದೆ ಯುವತಿ ಒಪ್ಪಿಕೊಂಡಿದ್ದಾಳೆ.

ಪ್ರಿಯತಮೆಯ ಬಂಧನದ ಸುದ್ದಿ ಹೊರಬೀಳುತ್ತಿದ್ದಂತೆ ಪ್ರಿಯಕರ ಸಿದ್ದಾರ್ಥ್ ಹಾಗೂ ಸುಧಾಂಶು ತಲೆಮರೆಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಸದಾಶಿವ ನಗರ ಪೊಲೀಸರು ಬಲೆ ಬೀಸಿದ್ದಾರೆ.

SCROLL FOR NEXT