ರಾಜ್ಯ

ಕೋವಿಡ್ ನಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡವರ ನೆರವಿಗೆ ನಿಲ್ಲಿ: ಬಿಜೆಪಿ ಶಾಸಕರು, ಸಚಿವರ ತಂಡ ರಚನೆ

Manjula VN

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡವರ ನೆರವು ನೀಡಲು ಹಾಗೂ ಸಾಂತ್ವನ ಹೇಳಲು ನಿರ್ಧರಿಸುವ ರಾಜ್ಯ ಬಿಜೆಪಿ, ಇದಕ್ಕಾಗಿ ಶಾಸಕರು ಹಾಗೂ ಸಚಿವರನ್ನೊಳಗೊಂಡ ತಂಡವೊಂದನ್ನು ರಚನೆ ಮಾಡಿದೆ. 

ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನೊಳಗೊಂಡ ತಂಡವನ್ನು ರಾಜ್ಯ ಬಿಜೆಪಿ ರಚನೆ ಮಾಡಿದೆ. 

ಇದರ ಆರಂಭವೆಂಬಂತೆ ಸಚಿವ ಆರ್.ಅಶೋಕ್ ಅವರು ಕೋವಿಡ್ ನಿಂದ ಮೃತಪಟ್ಟ ಜೆಡಿಎಸ್ ಕಾರ್ಯಕರ್ತರೊಬ್ಬರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. 

ಪದ್ಮನಾಭನಗರದಲ್ಲಿರುವ ಜೆಡಿಎಸ್ ಕಾರ್ಯಕರ್ತನ ನಿವಾಸಕ್ಕೆ ಆರ್.ಅಶೋಕ್ ಅವರು ಬೇಟಿ ನೀಡಿ, ಸಾಂತ್ವನ ಹೇಳಿದರು. 

ಬಳಿಕ ಮಾತನಾಡಿದ ಅವರು, ಕೊರೋನಾದಿಂದ ಮೃತಪಟ್ಟ ಪ್ರತೀಯೊಬ್ಬರ ಮನೆಗಳಿಗೂ ಪಕ್ಷಭೇದ ಮರೆತು ಭೇಟಿ ನೀಡುತ್ತೇವೆ. ರಾಜಕೀಯ ಪಕ್ಷವೆಂಬುದನ್ನು ಮರೆತು ಮಾನವೀಯತೆಯ ಆಧಾರದ ಮೇಲೆ ಪ್ರತೀಯೊಬ್ಬರ ಮನೆಗೂ ಭೇಟಿ ನೀಡುತ್ತೇವೆ. ಈ ಮೂಲಕ ಮೃತರ ಕುಟುಂಬಸ್ಥರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಲಾಗುತ್ತದೆ. ಅಲ್ಲದೆ, ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಧೈರ್ಯವನ್ನೂ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ನಾವೂ ಅವರ ಕುಟುಂಬ ಸದಸ್ಯರೇ ಎಂಬ ಸಂದೇಶವನ್ನು ಈ ಮೂಲಕ ನೀಡುತ್ತೇವೆ. ಸಂಕಷ್ಟ ಸಂದರ್ಭದಲ್ಲಿ ಅವರೊಂದಿಗೆ ನಿಲ್ಲುತ್ತೇವೆ. ಇದು ಪಕ್ಷದ ನಿರ್ಧಾರ, ಈಗಾಗಲೇ ತಂಡ ಪದ್ಮನಾಭವಗರಕ್ಕೆ ಭೇಟಿ ನೀಡಿದ್ದು, ಮುಂದಿನ 15 ದಿನಗಳಲ್ಲಿ ಬ್ಯಾಟರಾಯನಪುರ ಹಾಗೂ ಕೆ.ಆರ್.ಪುರಂಗೂ ಭೇಟಿ ನೀಡಲಿದೆ ಎಂದಿದ್ದಾರೆ. 

SCROLL FOR NEXT