ರಾಜ್ಯ

ಎಲ್ಲಾ ಕೋವಿಡ್ ಸೋಂಕಿತರ ಮಾದರಿಗಳನ್ನು 'ಜೀನೋಮ್ ಸೀಕ್ವೆನ್ಸಿಂಗ್' ಪರೀಕ್ಷೆಗೆ ಒಳಪಡಿಸಲಾಗುತ್ತಿದೆ: ಬಿಬಿಎಂಪಿ

Manjula VN

ಬೆಂಗಳೂರು: ಕೊರೊನಾ ವೈರಸ್‌ನ ಬೇರೆ ಬೇರೆ ರೂಪಾಂತರಿ ತಳಿಗಳು ಪತ್ತೆಯಾಗುತ್ತಿರುವುದು ಬಿಬಿಎಂಪಿಯ ಚಿಂತೆಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಕೊರೋನಾ ಸೋಂಕಿತರ ಗಂಟಲದ ದ್ರವದ ಮಾದರಿಗಳನ್ನು ಜೀನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಕೊರೋನಾ ವೈರಾಣುವಿನ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ ರೂಪಾಂತರಿ ತಳಿಗಳು ಪತ್ತೆಯಾಗುತ್ತಿರುವುದರಿಂದ ಬಿಬಿಎಂಪಿಯೂ ಜೀನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗಳನ್ನು ನಡೆಸಲಿದೆ. ಸೋಂಕು ದೃಢಪಡುವ ಗಂಟಲ ದ್ರವಗಳ ಮಾದರಿಗಳಲ್ಲಿ ಶೇ 5ರಷ್ಟನ್ನು ಈ ಪ್ರಕ್ರಿಯೆಗೆ ಒಳಪಡಿಸಲಿದ್ದೇವೆಂದು ಹೇಳಿದ್ದಾರೆ. 

ಕೋರೋನಾ ವೈರಸ್ ಹಲವು ವಿಧದಲ್ಲಿ ರೂಪಾಂತರಗೊಳ್ಳುತ್ತಿದ್ದು, ಅದಕ್ಕೆ ತಕ್ಕ ಚಿಕಿತ್ಸೆ ನೀಡುವ ಅಗತ್ಯವಿದೆ. ಡೆಲ್ಟಾ ವೈರಸನ್ನು ಭಾರತದಲ್ಲಿ ಪತ್ತೆ ಹಚ್ಚಲಾಗಿದ್ದು, ಈಗ ಹಲವು ದೇಶಗಳಲ್ಲಿ ಈ ವೈರಸ್ ಕಂಡು ಬಂದಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಬಂದಿದೆ ಎಂಬುದನ್ನು ಮಾಧ್ಯಮಗಳಲ್ಲಿ ತಿಳಿದುಕೊಂಡಿದ್ದೇನೆ. 

ಡೆಲ್ಟಾ ಪ್ಲಸ್ ಮತ್ತು ಡೆಲ್ಟಾ ವೈರಸ್ ನಡುವೆ ಏನು ವ್ಯತ್ಯಾಸವಿದೆ, ಯಾವ ರೀತಿ ರೂಪಾಂತರಗೊಳ್ಳುತ್ತಿದೆ, ಚಿಕಿತ್ಸೆ ಹೇಗೆ ಎಂಬುದರ ಬಗ್ಗೆ ತಜ್ಞರ ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಆರೋಗ್ಯ ತಜ್ಞರ ಸಬೆ ನಡೆಯಲಿದ್ದು, ಅಲ್ಲಿ ಡೆಲ್ಟಾ-ಪ್ಲಸ್ ಹಾಗೂ ಮೂರನೇ ಅಲೆಯಲ್ಲಿ ಮಕ್ಕಳ ಮೇಲಿನ ಪರಿಣಾಮ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. 

ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷಾ ನೆಗೆಟಿವ್ ವರದಿ ಕಡ್ಡಾಯಗೊಳಿಸಲು ಆರೋಗ್ಯ ತಜ್ಞರು ಸೂಚಿಸಿದರೆ, ಬಿಬಿಎಂಪಿ ಜಾರಿಗೆ ತರಲು ಬದ್ಧವಾಗಿದೆ. ಇನ್ನು ನಿತ್ಯ ಪಾಸಿಟಿವ್ ಪ್ರಕರಣಗಳನ್ನು ನಾವು ವಿಶೇಷವಾಗಿ ಗಮನಿಸುತ್ತಿದ್ದೇವೆ. ರೂಪಾಂತರ ವೈರಸ್'ನಿಂದ ಸಮಸ್ಯೆಯಾಗದಂತೆ ಕ್ರಮವಹಿಸಿದ್ದು, ಅಗತ್ಯಬಿದ್ದರೆ, ಆರ್'ಟಿಪಿಸಿಆರ್ ಕಡ್ಡಾಗೊಳಿಸಲಾಗುವುದು ಎಂದಿದ್ದಾರೆ. 

ಬಿಬಿಎಂಪಿಯಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಲಸಿಕೆ ಉತ್ಸವಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇನ್ನು, ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಒಟ್ಟು 68 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ, 1,68,958 ಮಂದಿಗೆ ಲಸಿಕೆ ನೀಡುವ ಮೂಲಕ ಅಭಿಯಾನ ಯಶಸ್ವಿಯಾಗಿದೆ ಎಂದು ಹೇಳಿದರು. 

SCROLL FOR NEXT