ರಾಜ್ಯ

ಮೂರು ತಿಂಗಳಲ್ಲಿ ಸಬ್ ಅರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ: ಸಿಎಂ ಯಡಿಯೂರಪ್ಪ 

Srinivasamurthy VN

ಬೆಂಗಳೂರು: ಮೂರು ತಿಂಗಳಲ್ಲಿ ಸಬ್ ಅರ್ಬನ್ ರೈಲು ಯೋಜನೆ ಶಂಕುಸ್ಥಾಪನೆಯಾಗಲಿದ್ದು, ಈ ಬಗ್ಗೆ ಕಾಂಗ್ರೆಸ್‌ನವರು ಬಂದು ನೋಡಿಕೊಂಡು ಹೋಗಲಿ. ಟೀಕೆ ಮಾಡುವುದನ್ನು ಬಿಡಲಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಹೀಲಲಿಗೆ ವರೆಗೆ ಸಂಚರಿಸಿ, ಬೆಂಗಳೂರು ಉಪ ನಗರ ರೈಲು ಯೋಜನೆ ಹಾಗೂ ರೈಲು ಮಾರ್ಗ ಡಬಲಿಂಗ್ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. 

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾಗಿದ್ದು,ಪ್ರಧಾನಿ ಮೋದಿ ಅವರಿಂದಲೇ ಯೋಜನೆಗೆ ಶಂಕುಸ್ಥಾಪನೆ ನೆರವೇರಲಿದೆ. ಆದಷ್ಟು ಬೇಗ ಯೋಜನೆ ಪೂರ್ಣಗೊಳ್ಳಲು ಪ್ರಧಾನಿ ‌ಮೋದಿ ಇದಕ್ಕೆ ಹೆಚ್ಚು ಒತ್ತು ಸಹಕಾರ ಕೊಡುತ್ತಿದ್ದಾರೆ. ಬಹಳ ದಿನಗಳ ಕನಸು  ಸಬ್ ಅರ್ಬನ್ ಯೋಜನೆ‌ ತ್ವರಿತಗತಿಯಲ್ಲಿ ಸಾಗುತ್ತಿದೆ. ಈಗಲಾದರೂ ಕಾಂಗ್ರೆಸ್ ಟೀಕಿಸುವುದನ್ನು ಬಿಡಲಿ ಎಂದರು.

ಸಬ್ ಅರ್ಬನ್‌ ಯೋಜನೆಯಿಂದ ಬೆಂಗಳೂರು ಸಂಚಾರ ದಟ್ಟಣೆ ಕಡಿಮೆ ಆಗುವುದರ ಜೊತೆಗೆ ನಗರ ಹೊರವಲಯದ ಉಪನಗರ ಸಾರಿಗೆ ಸಂಪರ್ಕ ಸುಲಭವಾಗಲಿದೆ. ರೈಲ್ವೆ ಡಬಲಿಂಗ್ ಯೋಜನೆಗಳಿಂದ ಹೆಚ್ಚುವರಿ ರೈಲುಗಳ ಕಾರ್ಯಾಚರಣೆಗೆ ಅನುಕೂಲವಾಗಲಿದೆ ಎಂದರು.

15767 ಕೋಟಿ ರೂ. ವೆಚ್ಚದಲ್ಲಿ 148 ಕಿ.ಮೀ ಉದ್ದದ 4 ಕಾರಿಡಾರ್‌ಗಳ ಸಬ್ ಅರ್ಬನ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಯೋಜನೆಯ ವೆಚ್ಚವನ್ನು ಭಾರತ ಸರ್ಕಾರದ ಅನುದಾನ ಬಾಹ್ಯ ಸಂಪನ್ಮೂಲಗಳ 20:20:60 ಅನುಪಾತದಡಿ ಭರಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಕರ್ನಾಟಕ ಸರ್ಕಾರ  ಈಗಾಗಲೇ 400 ಕೋಟಿ ರೂ. ಅನ್ನು 2020-21ರಲ್ಲಿ ಬಿಡುಗಡೆಗೊಳಿಸಿದೆ ಎಂದರು.

2023 ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು ನಿಗದಿತ ಕಾಲಮಿತಿಯೊಳಗೆ ಈ ಸಬ್ ಅರ್ಬನ್ ಯೋಜನೆ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.
 

SCROLL FOR NEXT