ಕೋವಿಡ್-19: ರಾಜ್ಯದಲ್ಲಿ 70 ದಿನಗಳ ಬಳಿಕ ದೈನಂದಿನ ಸಾವಿನ ಸಂಖ್ಯೆ ಇಳಿಕೆ!
ರಾಜ್ಯದಲ್ಲಿ ಕೋವಿಡ್ ಸೋಂಕು ಹಾಗೂ ಸಾವಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಭಾನುವಾರ 100ಕ್ಕಿಂತ ಕಡಿಮೆ ಸಾವು ಸಂಭವಿಸಿದೆ.
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹಾಗೂ ಸಾವಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಭಾನುವಾರ 100ಕ್ಕಿಂತ ಕಡಿಮೆ ಸಾವು ಸಂಭವಿಸಿದೆ.
ಏಪ್ರಿಲ್ 18ರಂದು 81 ಸಾವು ವರದಿಯಾಗಿತ್ತು. ಇದಾದ 70 ದಿನಗಳ ಬಳಿಕ ಮತ್ತೆ ಸಾವಿನ ಪ್ರಮಾಣ ನೂರಕ್ಕಿಂತ ಕಡಿಮೆ ದಾಖಲಾಗಿದೆ.
ಈ 70 ದಿನಗಳ ಅವಧಿಯಲ್ಲಿ ಕೆಲ ದಿನಗಳಂದು 500-600 ಸಾವುಗಳೂ ವರದಿಯಾಗಿದ್ದವು. ಆದರೆ, 10-15 ದಿನದಲ್ಲಿ ಸಾವಿನ ಸಂಖ್ಯೆ 200ಕ್ಕಿಂತ ಕಡಿಮೆ ಆಗಿದ್ದರೂ ಮರಣ ಪ್ರಮಾಣ ಏರುಗತಿಯಲ್ಲಿದೆ.
ಬೆಂಗಳೂರು ನಗರದಲ್ಲಿ 11 ಮಂದಿ ಮೃತರಾಗಿದ್ದು, ಮೈಸೂರು ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 15 ಮಂದಿ ಮರಣವನ್ನಪ್ಪಿದ್ದಾರೆ. ಇನ್ನು 11 ಜಿಲ್ಲೆಗಳಲ್ಲಿ ಕೋವಿಡ್ ಸಾವಿನ ವರದಿಯಾಗಿಲ್ಲ.
ರಾಜ್ಯದಲ್ಲಿ ನಿನ್ನೆ ಒಟ್ಟಾರೆ 3,604 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ 788, ಮೈಸೂರು 478, ದಕ್ಷಿಣ ಕನ್ನಡ 454 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಐದು ಜಿಲ್ಲೆಗಳಲ್ಲಿ 10ಕ್ಕಿಂದ ಕಡಿಮೆ ಪ್ರಕರಣ, 18 ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 7,699 ಮಂದಿ ಗುಣಮುಖರಾಗಿದ್ದು, ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 1.01ಲಕ್ಷಕ್ಕೆ ಕುಸಿದಿದೆ. ಈ ವರೆಗೆ ಒಟ್ಟು 128.34 ಲಕ್ಷ ಮಂದಿ ಸೋಂಕು ಪೀಡಿತರಾಗಿದ್ದು, 26.98 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಒಟ್ಟು 34,743 ಮಂದಿ ಮರಣವನ್ನಪ್ಪಿದ್ದಾರೆ.