ರಾಜ್ಯ

ಕೋವಿಡ್ ಆತಂಕ: ಕೊಡಗು ಜಿಲ್ಲೆಗೆ ಬರಬೇಡಿ: ಪ್ರವಾಸಿಗರಿಗೆ ಶಾಸಕ ಬೋಪಯ್ಯ ಮನವಿ

Manjula VN

ಮಡಿಕೇರಿ: ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಏರಿಳಿಯುತ್ತಿದ್ದು, ಕೊಡುಗು ಜಿಲ್ಲೆ ಸ್ಥಳೀಯರ ಆರೋಗ್ಯ ಹಿತದೃಷ್ಟಿಯಿಂದ ಹೊರಗಿನವರಾರೂ ನಮ್ಮ ಜಿಲ್ಲೆಗೆ ಬರುವುದು ಬೇಡ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೊಡಗು ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣವನ್ನು ಶೇ.5ಕ್ಕಿಂತ ಕಡಿಮೆ ಇಳಿಸಲು ಆಡಳಿತ ಮಂಡಳಿ ಸಾಕಷ್ಟು ಪರಿಶ್ರಮ ಪಡುತ್ತಿದೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ, ಕೊರೋನಾ ಏರಿಳಿಯುತ್ತಲೇ ಇದೆ. ಹೊರಗಿನಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ವೀಕೆಂಡ್ ಸಂದರ್ಭದಲ್ಲಿ ಬೆಂಗಳೂರಿನಿಂದ ಸಾಕಷ್ಟು ಜನರು ಜಿಲ್ಲೆಗೆ ಬರುತ್ತಿದ್ದಾರೆ. ಎಸ್ಟೇಟ್ ಕೆಲಸಗಳಿಗೆಂದು ಹೊರಗಿನಿಂದ ಜನರು ಜಿಲ್ಲೆಗೆ ಬರುತ್ತಿದ್ದಾರೆ. ಇದರಿಂದ ಸೋಂಕು ನಿಯಂತ್ರಿಸುವುದು ಕಷ್ಟಕರವಾಗುತ್ತಿದೆ. ಹೀಗಾಗಿ ನಮ್ಮ ಜಿಲ್ಲೆಗೆ ಯಾವ ಪ್ರವಾಸಿಗರು ಬರೋದು ಬೇಡ ಎಂದು ಹೇಳಿದ್ದಾರೆ. 

ಈಗಾಗಲೇ ಎಸ್ಟೇಟ್ ಕೆಲಸಗಳಿಗೆ ಹೊರಗಿನಿಂದ ಜನರ ನೇಮಕ ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಎಸ್ಟೇಟ್ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಬೋಪಯ್ಯ ಅವರ ಈ ನಿರ್ಧಾರಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಾಜನ್ ಅವರು ಬೆಂಬಲ ಸೂಚಿಸಿದ್ದಾರೆ. ಜುಲೈ.5ರವರೆಗೂ ಯಾವುದೇ ಪ್ರವಾಸಿಗರೂ ಜಿಲ್ಲೆಗೆ ಬರಬಾರದು ಎಂದು ಹೇಳಿದ್ದಾರೆ. 

ಈ ಕುರಿತು ಪೊಲೀಸರು ಹಾಗೂ ಇತರೆ ಇಲಾಖೆಗಳಿಗೆ ಸೂಚನೆ ನೀಡುವುದಕ್ಕೂ ಮುನ್ನ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. 

SCROLL FOR NEXT