ರಾಜ್ಯ

ಮಹದೇಶ್ವರ ಬೆಟ್ಟ: ಕಾಣೆಯಾಗಿದ್ದ ಚಿನ್ನದ ಕರಡಿಗೆ ಕಸದ ರಾಶಿಯಲ್ಲಿ ಪತ್ತೆ!

Manjula VN

ಚಾಮರಾಜನಗರ: ಮಲೆಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಉತ್ಸವಮೂರ್ತಿಯ ಮೇಲಿದ್ದ ಚಿನ್ನದ ಕರಡಿಗೆ 7 ದಿನಗಳ ಬಳಿಕ ಪತ್ತೆಯಾಗಿದೆ. 

ಉತ್ಸವ ಮೂರ್ತಿಯ ಮೇಲಿದ್ದ ಚಿನ್ನದ ಕರಡಿಗೆ ರಾಜಗೋಪುರದ ಮುಂಭಾಗ ಕಸ ಹಾಕುವ ಜಾಗದಲ್ಲಿ ಗುರುವಾರ ಮಧ್ಯಾಹ್ನ 3.45ರ ಸುಮಾರಿಗೆ ದೇವಾಲಯದ ಹೊರಗುತ್ತಿಗೆ ನೌಕರ ಸುನೀಲ್ ಕುಮಾರ್ ಎಂಬುವವರಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ. 

ಮಲೈ ಮಹದೇಶ್ವರನಿಗೆ ಬೇಡಗಂಪಣ ಸಮುದಾಯದ ಅರ್ಚಕರ ಗುಂಪುಗಳು ಸರದಿ ಪ್ರಕಾರ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ. ಪ್ರತಿ ತಿಂಗಳು ಸರದಿ ಪ್ರಕಾರ ಅರ್ಚಕರು ಬದಲಾಗುತ್ತಾ ಹೋಗುತ್ತಾರೆ. ಪ್ರತಿ ತಿಂಗಳು ಉತ್ಸವ ಮೂರ್ತಿ ಸೇರಿದಂತೆ ಇನ್ನಿತರೆ ಒಡವೆವಸ್ತ್ರ, ಪೂಜಾ ಸಾಮಾಗ್ರಿಗಳನ್ನು ಆಯಾ ಅರ್ಚಕರ ಸುಪರ್ದಿಗೆ ವಹಿಸಲಾಗುತ್ತದೆ. ಇದರ ಪ್ರಕಾರ ಈ ಬಾರಿ ಕೆ.ವಿ.ಮಾದೇಶ್, ಕಿರುಬಮಾದ ತಮ್ಮಡಿ ಗುಂಪಿನ ಅರ್ಚಕರ ಸುಪರ್ದಿನಲ್ಲಿ ಈ  ಚಿನ್ನದ ಕರಡಿಗೆ ಇತ್ತು.

ಆದರೆ, 7 ದಿನಗಳ ಹಿಂದೆ ಚಿನ್ನದ ಕರಡಿಗೆ ಕಾಣೆಯಾಗಿದ್ದರು ದೂರು ದಾಖಲಿಸಿರಲಿಲ್ಲ. ಹಾಲಿ ಸರದಿಯಲ್ಲಿದ್ದ ಅರ್ಚಕರ ಗುಂಪಿಗೆ ಕೆಟ್ಟ ಹೆಸರು ತರಲು ಈ ಚಿನ್ನದ ಕರಡಿಗೆಯನ್ನು ಉತ್ಸವ ಮೂರ್ತಿಯಿಂದ ತೆಗೆದು ಹುಂಡಿಗೆ ಹಾಕಿರಬಹುದೆಂಬ ಶಂಕೆಯು ವ್ಯಕ್ತವಾಗಿತ್ತು. ಹುಂಡಿ ಎಣಿಕೆ ವೇಳೆ ಚಿನ್ನದ ಕರಡಿಗೆ ಸಿಕ್ಕರೆ ಪ್ರಕರಣಕ್ಕೆ ತೆರೆ ಎಳೆಯಲು ಸಿಗದಿದ್ದರೆ ಸರದಿ ಅರ್ಚಕರಿಂದ ಹೊಸ ಚಿನ್ನದ ಕರಡಿಗೆ ಮಾಡಿಸಿ ಪ್ರಕರಣ ಕ್ಕೆ ಇತಿಶ್ರಿ ಹಾಡಲೂ ಸಹ ನಿರ್ಧಾರಿಸಲಾಗಿತ್ತು ಎನ್ನಲಾಗಿದೆ.

ಆದರೆ, ನಂತರ ಹುಂಡಿ ಎಣಿಕೆ ಸಂದರ್ಭದಲ್ಲಿ ಚಿನ್ನದ ಕರಡಿಗೆ ಪತ್ತೆಯಾಗಿರಲಿಲ್ಲ. ಈ ನಡುವೆ ಚಿನ್ನದ ಕರಡಿಗೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿ, ಸರದಿ ಅರ್ಚಕರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿತ್ತು. ಚಿನ್ನದ ಕರಡಿಗೆ ಕಸದ ರಾಶಿಯಲ್ಲಿ ಪತ್ತೆಯಾಗಿದೆ. ಕಳೆದ ಏಳು ದಿನಗಳಿಂದ ಹುಡುಕಾಟ ನಡೆಸಿದ್ದರೂ ಸಿಗದ ಚಿನ್ನದ ಕರಡಿಗೆ ಕಸದ ರಾಶಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ

ಕಸದ ರಾಶಿಯಲ್ಲಿ ಚಿನ್ನದ ಕರಡಿಗೆ ಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಜಯಾವಿಭವ ಸ್ವಾಮಿ, ಪೊಲೀಸ್ ಇನ್ಸ್ ಪೆಕ್ಟರ್ ಜಿ.ಎಸ್.ರಮೇಶ್ ಹಾಗೂ ಉಪ ಕಾರ್ಯದರ್ಶಿ ಬಸವರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಕರಡಿಗೆಯನ್ನು ದೇವಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ. ಸುನೀಲ್ ಅವರ ಪ್ರಾಮಾಣಿಕ ಕಾರ್ಯ ಪ್ರಕರಣದ ಸಮಸ್ಯೆಯಷ್ಟನ್ನೇ ಬಗೆಹರಿಸಿಲ್ಲ, ದೇವಾಲಯದ ಮೂರು ಅರ್ಚಕರನ್ನೂ ರಕ್ಷಣೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT