ಕರ್ನಾಟಕ ಕೊರೋನಾ ಸಂಕಷ್ಟ: ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್ ಸಹಾಯವಾಣಿ ಆರಂಭ
ಕೊರೋನಾ ಎರಡನೇ ಅಲೆಯಿಂದಾಗಿ ಜನ ಸಾಮಾನ್ಯರು ತತ್ತರಿಸಿರುವ ಈ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ಆರೋಗ್ಯ ಸಹಾಯವಾಣಿ ತೆರೆಲಿದೆ.
ಮೈಸೂರು: ಕೊರೋನಾ ಎರಡನೇ ಅಲೆಯಿಂದಾಗಿ ಜನ ಸಾಮಾನ್ಯರು ತತ್ತರಿಸಿರುವ ಈ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ಆರೋಗ್ಯ ಸಹಾಯವಾಣಿ ತೆರೆದು, ಆ ಮೂಲಕ ವೈದ್ಯಕೀಯ ಸೇವೆ ಒದಗಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ ಅವರು ಹೇಳಿದ್ದಾರೆ.
ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ 6 ಕೋಟಿ ವೆಚ್ಚದಲ್ಲಿ ಆರೋಗ್ಯ ಸೆಲ್ ತೆರೆದು ನುರಿತ ಕಾರ್ಯಕರ್ತರಿಂದ ಆರೋಗ್ಯ ತಪಾಸಣೆ ನಡೆಸಿದ್ದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬಾರಿ ಎರಡನೇ ಅಲೆ ಕಾಣಿಸಿಕೊಂಡಿರುವುದರಿಂದ ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ಆರೋಗ್ಯ ಸಹಾಯವಾಣಿ ಆರಂಭಿಸಿದೆ. ರಾಜ್ಯದ 30 ಜಿಲ್ಲೆಗಳಲ್ಲಿಯೂ ಈ ಸಹಾಯವಾಣಿ ಕಾರ್ಯಾರಂಭ ಮಾಡಲಿದೆ. ಮೇ.1ರಂದು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತ್ಯೇಕವಾಗಿ ಸಹಾಯವಾಣಿ ಆರಂಭಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ವರೆಗೂ 320 ವೈದ್ಯರು ಸ್ವಯಂ ನೋಂದಣಿ ಮಾಡಿಕೊಂಡಿದ್ದಾರೆ. ಈ ವೈದ್ಯರು ಕೊರೋನಾ ಸೋಂಕಿತರು ಹಾಗೂ ಅವರ ಕುಟುಂಬ ಸದಸ್ಯರಿಗೆ ಸಹಾಯ ಹಾಗೂ ಅಗತ್ಯ ಮಾಹಿತಿಗಳನ್ನು ನೀಡಲಿದ್ದಾರೆ. ಆರಂಭಿಕ ಹಂತದಲ್ಲಿ ಮೈಸೂರು ಜಿಲ್ಲೆಯಲ್ಲಿ ಸಹಾಯವಾಣಿ ಆರಂಭಿಸಲಾಗುತ್ತಿದೆ. ನಂತರ ಪ್ರತಿ ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ಸಹಾಯವಾಣಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇರಳ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲಾಗಿದ್ದು, ಇಂದು ಕೇರಳ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಕೊರೋನಾ ನಿಯಂತ್ರಣದಲ್ಲಿ ಕೇರಳ ರಾಜ್ಯ ದೇಶದಲ್ಲಿ ಮುಂಚೂಣಿಯಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ರೀತಿ ಮುಂಜಾಗ್ರತೆ ತೆಗೆದುಕೊಂಡಿದ್ದರೆ ನಮ್ಮ ರಾಜ್ಯದಲ್ಲಿ ಈ ಸ್ಥಿತಿ ಬರುತ್ತಿರಲಿಲ್ಲ.
ಇಂದು ವಿದೇಶಿ ಮಾಧ್ಯಮಗಳು ಭಾರತದ ಬಗ್ಗೆ ಮಾತನಾಡುವಂತಾಗಿದೆ. ಇದು ಟೀಕೆ ಮಾಡುವ ಸಮಯ ಅಲ್ಲ. ಸೋನಿಯಾ ಗಾಂಧಿ ಅವರು ಐದು ಅಂಶಗಳನ್ನು ಉಲ್ಲೇಖಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಬೇರೆ ಇಲಾಖೆಯ ಅನುದಾನವನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೊರೋನಾ ನಿಯಂತ್ರಣ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿದ್ದರು. ಆದರೆ ಪತ್ರಕ್ಕೆ ಆರೋಗ್ಯ ಸಚಿವ ಹರ್ಷವರ್ಧನ್ ವ್ಯಂಗ್ಯವಾಡಿದರು. ಮನಮೋಹನ್ ಸಿಂಗ್ ಪತ್ರಕ್ಕೆ ವ್ಯತಿರಿಕ್ತವಾಗಿ ಪತ್ರ ಬರೆದಿದ್ದರು. ದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಈಗಲಾದರೂ ತ್ವರಿತ ಗತಿಯಲ್ಲಿ ಎಲ್ಲರಿಗೂ ಲಸಿಕೆ ನೀಡಬೇಕು.
ಉದ್ಯೋಗ ಖಾತ್ರಿ ಯೋಜನೆ ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕು. ವರ್ಷದ 100 ದಿನ ಕೂಲಿಯನ್ನು 150 ದಿನಗಳಿಗೆ ಏರಿಸಬೇಕು. ಪ್ರತಿ ದಿನದ ಕೂಲಿಯಲ್ಲಿ 289 ರೂ ನಿಂದ 350 ರೂ ಗಳಿಗೆ ಹೆಚ್ಚಳ ಮಾಡಬೇಕು. ಇನ್ನೂ ಕೂಡ ಸರ್ಕಾರ ಗಂಜಿಕೇಂದ್ರ ತೆರೆದಿಲ್ಲ. ಸಂಘ ಸಂಸ್ಥೆ, ವ್ಯಾಪಾರಸ್ತರು ಇತರರ ಸಹಾಯ ಪಡೆದು ಗಂಜಿ ಕೇಂದ್ರ ತೆರೆಯಬೇಕು. ಅಸಂಘಟಿತ ವಲಯಗಳಿಗೆ ಉದ್ಯೋಗ ಇಲ್ಲದಂತಾಗಿದೆ. ಅಸಂಘಟಿತ ವಲಯಕ್ಕೆ ಸರ್ಕಾರ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.