ರಾಜ್ಯ

ಕೋವಿಡ್-19: ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.73.9ಕ್ಕೆ ಇಳಿಕೆ!

Manjula VN

ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೋನಾ ಆರ್ಭಟ ಹೆಚ್ಚಾಗಿದ್ದು, ಕಳೆದ ಫೆಬ್ರವರಿ ತಿಂಗಳಿನಲ್ಲಿ ಶೇ.98ರಷ್ಟಿದ್ದ ರಾಜ್ಯದ ಚೇತರಿಕೆ ಪ್ರಮಾಣ ಏಪ್ರಿಲ್ 30ರ ವೇಳೆಗೆ ಶೇ.73.9ಕ್ಕೆ ಇಳಿಕೆಯಾಗಿದೆ. 

ಈ ಹಿಂದೆ ಚೇತರಿಕೆ ಪ್ರಮಾಣದಲ್ಲಿ ಇತರೆ ರಾಜ್ಯಗಳನ್ನು ಹಿಂದಿಕ್ಕಿದ್ದ ಕರ್ನಾಟಕ ದೇಶದಲ್ಲಿಯೇ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇತರೆ ರಾಜ್ಯಗಳಿಗಿಂತಲೂ ಹಿಂದೆ ಉಳಿದಿದೆ. 

ಶೇ.83.7 (37,99,266) ಚೇತರಿಕೆ ಪ್ರಮಾಣದೊಂದಿಗೆ ದೇಶದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ನಂತರ ಸ್ಥಾನವನ್ನು ಶೇ.80.3 (12,61,801) ಕೇರಳ ಪಡೆದುಕೊಂಡಿದೆ. 

ಇನ್ನು ತಮಿಳುನಾಡು ಶೇ.88.9, ದೆಹಲಿ ಶೇ.89.9, ಆಂಧ್ರಪ್ರದೇಶ ಶೇ.88.1, ಪಶ್ಚಿಮ ಬಂಗಾಳ ಶೇ.84.9, ಛತ್ತೀಸ್ಗಢ ಶೇ.82.3, ಉತ್ತರಪ್ರದೇಶದ ಶೇ.73.6ರಷ್ಟು ಚೇತರಿಕೆ ಪ್ರಮಾಣವನ್ನು ಹೊಂದಿದೆ. 

ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಸಾಕಷ್ಟು ಜನರು ಶೀಘ್ರಗತಿಯಲ್ಲಿ ಗಂಭೀರ ಸ್ಥಿತಿಗೆ ತಲುಪುತ್ತಿದ್ದಾರೆ. ಇದರಿಂದ ಗುಣಮುಖರಾಗಲು ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಹೀಗಾಗಿ ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು, ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಶೀಘ್ರಗತಿಯಲ್ಲಿ ಹುಡುಕಿ ಚಿಕಿತ್ಸೆ ನೀಡುವುದರಿಂತ ಚೇತರಿಕೆ ಪ್ರಮಾಣ ಹೆಚ್ಚಳವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. 

ಬಯೋಎಥಿಕ್ಸ್ ಸಂಶೋಧಕ ಅನಂತ್ ಭನ್ ಮಾತನಾಡಿ, ಪರೀಕ್ಷೆಗಳು ಹೆಚ್ಚಾದಂತೆ ಹೆಚ್ಚೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇಷ್ಟು ಜನ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಸೋಂಕಿತರ ಸಂಖ್ಯೆ ಇಳಿಯುತ್ತಿದ್ದಂತೆಯೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಕೂಡ ಇಳಿಕೆಯಾಗಲಿದೆ. ಬಳಿಕ ಚೇತರಿಕೆ ಪ್ರಮಾಣ ಏರಿಕೆಯಾಗುವುದನ್ನು ಕಾಣಬಹುದು ಎಂದು ಹೇಳಿದ್ದಾರೆ. 

ಸಾಕಷ್ಟು ಜನರಿಗೆ ಆರೋಗ್ಯ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಇದರಿಂತ ರಾಜ್ಯದಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಕಳೆದ ವರ್ಷದ ಪಾಠವನ್ನು ನಾವು ಕಲಿಯಬೇಕಿದೆ. ಕೊರೋನಾ ಎರಡನೇ ಅಲೆಯನ್ನು ಇತರೆ ರಾಷ್ಟ್ರಗಳು ಯಾವ ರೀತಿ ನಿಭಾಯಿಸುತ್ತಿವೆ ಎಂಬುದನ್ನೂ ನೋಡಬೇಕಿದೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚೆಚ್ಚು ಬಂಡವಾಳ ಹೂಡಬೇಕೆಂಬುದನ್ನು ತಿಳಿಸಲು ಪ್ರಸ್ತುತ ಪರಿಸ್ಥಿತಿಯೇ ದೊಡ್ಡ ಸಂದೇಶವಾಗಿದೆ ಎಂದು ತಿಳಿಸಿದ್ದಾರೆ. 

ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯ ಪ್ರದೀಪ್ ರಂಗಪ್ಪ ಅವರು ಮಾತನಾಡಿ, ಹೆಚ್ಚೆಚ್ಚು ಪರೀಕ್ಷೆಗಳನ್ನು ಮಾಡುವುದರಿಂದ ಆರಂಭಿಕ ಹಂತದಲ್ಲಿಯೇ ಸೋಂಕಿತರನ್ನು ಪತ್ತೆ ಮಾಡಲು ಸಹಾಯಕವಾಗುತ್ತವೆ. ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ನಡೆಸದೇ ಹೋದಲ್ಲಿ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರನ್ನು ಹುಡುವುದು ಕಷ್ಟಕರವಾಗಿ ಹೋಗುತ್ತದೆ. ಇದರಿಂದ ಸಾವಿನ ಪ್ರಮಾಣ ಏರಿಕೆಯಾಗುತ್ತದೆ. ಹೀಗಾಗಿ ಮೂರು ಟಿ ಸೂತ್ರಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕಿದೆ. ಪ್ರಸ್ತುತ ಸೋಂಕು ಪ್ರಮಾಣ ಏರಿಕೆಯಾಗುತ್ತಿದ್ದು, ಚೇತರಿಕೆ ಪ್ರಮಾಣ ಏರಿಕೆಯಾಗಲು ಕಾಲಾವಕಾಶ ಬೇಕಾಗುತ್ತದೆ ಎಂದಿದ್ದಾರೆ. 

SCROLL FOR NEXT