ರಾಜ್ಯ

ವಿಶೇಷ ಆಕ್ಸಿಜನ್ ರೈಲುಗಳ ಕಾರ್ಯಾರಂಭಕ್ಕೆ ರೈಲ್ವೆ ಮಂಡಳಿಗೆ ರಾಜ್ಯ ಸರ್ಕಾರ ಮನವಿ

Nagaraja AB

ಬೆಂಗಳೂರು: ರಾಜ್ಯದಲ್ಲಿನ ಕೋವಿಡ್ ಕೇರ್ ಸೆಂಟರ್ ಗಳು ಮತ್ತು ಆಸ್ಪತ್ರೆಗಳಲ್ಲಿನ ಸಮರ್ಪಕ ವೈದ್ಯಕೀಯ ಆಕ್ಸಿಜನ್  ಕೊರತೆ ನಿಭಾಯಿಸಲು ರಾಜ್ಯಕ್ಕೆ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ಆದ್ಯತೆ ನೀಡಬೇಕೆಂದು ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಶನಿವಾರ ರೈಲ್ವೆ ಮಂಡಳಿಯನ್ನು ಕೇಳಿರುವುದಾಗಿ ರೈಲ್ವೆ ವಲಯದ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಈ ಮನವಿಗೆ ರೈಲ್ವೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ.

ಬೆಂಗಳೂರಿನಲ್ಲಿ ವೈಟ್ ಫೀಲ್ಡ್ ಅಥವಾ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ನಡುವೆ ಮತ್ತು ಒಡಿಶಾದಲ್ಲಿ ಕಾಳಿಂಗ  ನಗರ ಅಥವಾ ಆಂಗುಲ್ ನಿಲ್ದಾಣ, ಆಂಧ್ರಪ್ರದೇಶದ ವಿಶಾಖಪಟ್ಟಣ ನಡುವೆ ಅನಿಲ ಟ್ಯಾಂಕರ್ ಹೊತ್ತೊಯ್ಯುವ ಆಕ್ಸಿಜನ್ ವಿಶೇಷ ರೈಲುಗಳ ಕಾರ್ಯಾರಂಭಕ್ಕೆ ರೈಲ್ವೆ ಮಂಡಳಿ ಮುಖ್ಯಸ್ಥ ಸುನೀತ್ ಶರ್ಮಾ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.

ಗ್ರೀನ್ ಚಾನೆಲ್ ಮೂಲಕ  ಸಮಯಕ್ಕೆ ಸರಿಯಾಗಿ ಆಕ್ಸಿಜನ್ ತಲುಪಿಸಲು ವಿಶೇಷ ಆಕ್ಸಿಜನ್ ರೈಲುಗಳ ಓಡಾಟ ಅಗತ್ಯವಿರುತ್ತದೆ. ಈ ರೈಲುಗಳ ಚಲನೆ ಮೇಲೆ ನಿಗಾ ವಹಿಸಲು ರೈಲ್ವೆ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರದ ಈ ಮನವಿಗೆ ನೈರುತ್ಯ ರೈಲ್ವೆ ವಲಯ ಜನರಲ್ ಮ್ಯಾನೇಜರ್ ಗಜಾನನ್ ಮಲ್ಯ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು ರೈಲ್ವೆ ವಿಭಾಗದ ಕೋವಿಡ್- ಕೇರ್ ಸೆಂಟರ್ ಗಳು ಹಾಗೂ ವಿಭಾಗೀಯ ರೈಲ್ವೆ ಆಸ್ಪತ್ರೆಗಳಲ್ಲಿ ಯಾವುದೇ
ಆಕ್ಸಿಜನ್ ಕೊರತೆಯಾಗಿಲ್ಲ. 2 ಸಾವಿರ ಲೀಟರ್ ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್ ಪ್ರಾಂಟ್ ಸ್ಥಾಪಿಸುವುದಾಗಿ ರೈಲ್ವೆ ವಿಭಾಗೀಯ
ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ ಬಹುಹಂತದ ಪೂರೈಕೆ ಮೂಲಕ ಆಕ್ಸಿಜನ್ ಖರೀದಿಸಲು ಯೋಜನೆ ಹಾಕಿಕೊಂಡಿದೆ.

ವಿಭಾಗೀಯ ರೈಲ್ವೆ ಮ್ಯಾನೇಜರ್ ಎಕೆ ವರ್ಮಾ ಭಾನುವಾರ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಉನ್ನತ ರೈಲ್ವೆ 
ಅಧಿಕಾರಿಗಳೊಂದಿಗೆ ಭಾನುವಾರ ಸರಣಿ ಸಭೆ ನಡೆಸಿದ್ದು, ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಮೂಲ
ಸೌಕರ್ಯ ಅಗತ್ಯತೆ ಕುರಿತಂತೆ ಚರ್ಚೆ ನಡೆಸಿದ್ದಾರೆ.

SCROLL FOR NEXT