ರಾಜ್ಯ

ವ್ಯವಸ್ಥೆ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಸಾವುಗಳಾಗಬೇಕು; ಸರ್ಕಾರದಿಂದ ನಡೆದ ಕೊಲೆ: ಚಾಮರಾಜನಗರ ದುರಂತಕ್ಕೆ ಕಾಂಗ್ರೆಸ್ ಆಕ್ರೋಶ

Shilpa D

ಬೆಂಗಳೂರು: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಆಮ್ಲಜನಕ ಸಿಲಿಂಡರ್ ಖಾಲಿಯಾಗಿ 24 ಜನರು ಮೃತಪಟ್ಟಿರುವ ಬಗ್ಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸರ್ಕಾರದ ನಿರ್ಲಕ್ಷ್ಯದಿಂದ ನಡೆದ ಕೊಲೆ, ಹೀಗಾಗಿ ಆರೋಗ್ಯ ಸಚಿವ ಕೆ,ಸುಧಾಕರ್ ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್  ರಾಜ್ಯ ಉಸ್ತುವಾರಿ ರಣ್ ದೀಪ್ ಸುರ್ಜೇವಾಲಾ ಒತ್ತಾಯಿಸಿದ್ದಾರೆ.

ಸರ್ಕಾರದ ವಿರುದ್ಧ ಆಕ್ರೋಶ  ವ್ಯಕ್ತ ಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದುರಂತಕ್ಕೆ ಸಂಬಂಧಿಸಿದ ವರದಿಯೊಂದನ್ನು ಲಗತ್ತಿಸಿ ಟ್ವೀಟ್ ಮಾಡಿದ್ದಾರೆ, ಇದು ಸಾವೋ ಅಥವಾ ಕೊಲೆಯೋ ಎಂದು ಪ್ರಶ್ನಿಸಿದ್ದಾರೆ. ದುರಂತಕ್ಕೆ ಸಂತಾಪ ಸೂಚಿಸಿರುವ ಅವರು, ವ್ಯವಸ್ಥೆಯು ಎಚ್ಚೆತ್ತುಕೊಳ್ಳುವ ಮೊದಲು ಇನ್ನೆಷ್ಟು ಸಂಕಟ ಅನುಭವಿಸಬೇಕೋ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು, ಮೃತರ ಕುಟುಂಬದವರಿಗೆ ತಲಾ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು  ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಇದು ಸಾವುಗಳಲ್ಲ. ಸರ್ಕಾರವೇ ಮಾಡಿರುವ  ಕೊಲೆಗಳು. ಈ ದುರಂತಕ್ಕೆ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಹೊಣೆ. ಈ ಎಲ್ಲರೂ ರಾಜಿನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. 

ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತಿ ನಿತ್ಯ 350 ಅಕ್ಸಿಜೆನ್ ಸಿಲೆಂಡರ್ ಗಳ ಅಗತ್ಯವಿದೆ, ಆದರೆ ನಿರ್ಲಕ್ಷ್ಯದಿಂದಾಗಿ ಇಷ್ಟು ಸಾವುಗಳಾಗಿವೆ, ಇದಕ್ಕೆ ಸರ್ಕಾರವೇ ಹೊಣೆ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ಮಚ್ಚು ಧ್ರುವನಾರಾಯಣ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ದುರಂತದ ಸಂಬಂಧ ಚರ್ಚೆ ನಡೆಸಿದರು, ಮುಖ್ಯಮಂತ್ರಿಗಳ ಮೇಲೆ ನಮಗೆ ವಿಶ್ವಾಸವಿಲ್ಲ,  ಹೀಗಾಗಿ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಜನರ ಜೀವವನ್ನು ರಕ್ಷಿಸುವಂತೆ ಮನವಿ ಮಾಡಿದ್ದೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ,

ರಾಜ್ಯಕ್ಕೆ ಪ್ರತಿದಿನ 1,750 ಟನ್ ಆಕ್ಸಿಜನ್ ಅವಶ್ಯಕತೆಯಿದೆ, ಆದರೆ ಕೇಂದ್ರ ಸರ್ಕಾರ ಕೇವಲ 850 ಟನ್ ನೀಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.

SCROLL FOR NEXT