ರಾಜ್ಯ

3 ಕೋಟಿ ಲಸಿಕೆ ಬರಲು ಇನ್ನೂ ತಿಂಗಳುಗಟ್ಟಲೆ ಕಾಯಬೇಕು: ಮುಖ್ಯ ಕಾರ್ಯದರ್ಶಿ ರವಿಕುಮಾರ್

Vishwanath S

ಬೆಂಗಳೂರು: ಮೂರು ಕೋಟಿ ಲಸಿಕೆ ಬರಲು ಇನ್ನೂ ತಿಂಗಳುಗಟ್ಟಲೆ ಆಗಬಹುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ‌ ರವಿಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಲಸಿಕೆ ಯಾವಾಗ ಬರುತ್ತದೆಯೋ ಎಂದು ನಿಗಧಿತವಾಗಿ ಆಗುವುದಿಲ್ಲ. ನಾವು ಆರ್ಡರ್ ಮಾಡಿದ್ದೇವೆ. ಉತ್ಪಾದಿಸುವವರು ನಮಗೆ ಕೊಡಬೇಕು. ಅದಕ್ಕೂ‌ ನಾವು ಕಾಯುತ್ತಿದ್ದೇವೆ. ಜನವರಿ 16ರಿಂದ ಲಸಿಕೆ ನೀಡಲು ಶುರು ಮಾಡಿ ನಾಲ್ಕು ತಿಂಗಳು ಆಯಿತು. ನಾಲ್ಕು ತಿಂಗಳಲ್ಲಿ ಬಂದಿರುವುದು. ಸರ್ಕಾರ ಎರಡು ಹಂತದಲ್ಲಿ ಲಸಿಕೆ ಹಾಕುತ್ತಿದ್ದು, 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಉಚಿತವಾಗಿ ಲಸಿಕೆ ಕೊಡುತ್ತಿದೆ. 18-45 ವರ್ಷ ಒಳಗಿನವರಿಗೆ ರಾಜ್ಯ ಸರ್ಕಾರವೇ ಖರೀದಿ ಮಾಡಿ ಹಾಕಬೇಕು. 

ಕರ್ನಾಟಕ ರಾಜ್ಯಕ್ಕೆ ಮೂರು ಕೋಟಿ ಲಸಿಕೆ ಆದೇಶ ಮಾಡಿದ್ದೇವೆ. ಅದರಲ್ಲಿ ನಮಗೆ ಒಂದು ಕೋಟಿ ಲಸಿಕೆ ಬಂದಿದೆ. ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾವುದು. 86 ಲಕ್ಷ ಜನರಿಗೆ ಫಸ್ಟ್ ಡೋಸ್ ನೀಡಿದ್ದೇವೆ. ಇದರಲ್ಲಿ 25 ಲಕ್ಷ ಜನಕ್ಕೆ ಎರಡನೇ ಡೋಸ್ ನೀಡಿದ್ದೇವೆ. ಇನ್ನೂ 60 ಲಕ್ಷ ಜನರಿಗೆ ಸೆಕೆಂಡ್ ಡೋಸ್ ಕೊಡಬೇಕು. ಸೆಕೆಂಡ್ ಡೋಸ್ ಕಡಿಮೆ ಆಗುತ್ತಿರುವುದರ ಬಗ್ಗೆ ಕೇಂದ್ರದ ಗಮನಕ್ಕೆ ತಂದಿದ್ದೇವೆ.

ಸಕಾಲದಲ್ಲಿ ಲಸಿಕೆ ಸಿಗದಿದ್ದರೆ ಏನು ಮಾಡುವುದು. ಅವರ ಪರಿಸ್ಥಿತಿ ಏನು ಪರಿಹಾರ ಏನು ಎಂದು ಕೇಳಿದ್ದೇವೆ. ಕೇಂದ್ರ ಏನು ಹೇಳುತ್ತದೆಯೋ ಅದನ್ನು ಕಾದುನೋಡಬೇಕು ಎಂದು ಸಿ.ಎಸ್ ರವಿಕುಮಾರ್ ಹೇಳಿದರು.

ಲಸಿಕೆ ಯಾವಾಗ ಬರುತ್ತದೆ ರಾಜ್ಯಕ್ಕೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅಸಹಾಯಕತೆ ತೋರಿದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಒಂದು ಕೋಟಿ ಡೋಸ್ ಬಂದಿದೆ. ಆರುವರೆ ಕೋಟಿ ಡೋಸ್ ಬೇಕು. ಎಲ್ಲರಿಗೂ ಎರಡು ಡೋಸ್ ಹಾಕಬೇಕು. ಇದು ಯಾವಾಗ ಬರುತ್ತದೆ ಎಂದು ನಾನಂತೂ ಹೇಳುವುದಿಲ್ಲ.ಇದು ಉತ್ಪಾದನೆ ಮೇಲೆ ಅವಲಂಬಿತವಾಗಿದೆ ಎಂದರು.

SCROLL FOR NEXT