ರಾಜ್ಯ

ಕೋವಿಡ್-19 ಸಂಬಂಧಿತ ನೆರವಿಗೆ 'ಬಿಎಂಸಿ 92' ಉಚಿತ ವೈದ್ಯ ಸೇವೆ

Srinivasamurthy VN

ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆಗೆ ಜನರು ತತ್ತರಿಸಿ ಹೋಗಿರುವಂತೆಯೇ ಇತ್ತ ವೈದ್ಯರ ತಂಡವೊಂದು ಉಚಿತ ವೈದ್ಯಕೀಯ ಸೇವೆ ಆರಂಭಿಸಿದೆ.

ಬೆಂಗಳೂರು ವೈದ್ಯಕೀಯ ಕಾಲೇಜಿನ 1992ರ ಬ್ಯಾಚ್‌ನ ಪದವೀಧರರ ಗುಂಪು ಬಿಎಂಸಿ-92 ಎಂಬ ಹೆಸರಿನಲ್ಲಿ ಪರ್ಯಾಯ ವೈದ್ಯಕೀಯ ಸೇವೆಯನ್ನು ಆರಂಭಿಸಿದ್ದು, ಸೋಂಕಿತರ ಚಿಕಿತ್ಸೆಗೆ ತಜ್ಞ ವೈದ್ಯರು, ಆಪ್ತ ಸಮಾಲೋಚನೆ, ಸಹಾಯವಾಣಿ, ಆಮ್ಲಜನಕ ಸಾಂದ್ರಕಗಳು, ಪಲ್ಸ್‌ ಆಕ್ಸಿಮೀಟರ್‌ಗಳು  ಸೇರಿದಂತೆ ಹಲವು ಸೇವೆಗಳನ್ನು ಒದಗಿಸಲಾಗುತ್ತಿದೆ. ಕೋವಿಡ್‌ ರೋಗಿಗಳು ಆಮ್ಲಜನಕದ ಹಾಸಿಗೆಯವರೆಗೂ ಬರುವುದನ್ನು ತಡೆದು ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡುವುದು ಈ ತಂಡದ ಗುರಿಯಾಗಿದೆ.

ಈ ತಂಡದ ಕಾರ್ಯಕ್ಕೆ ಅಮೆರಿಕ, ಬ್ರಿಟನ್‌ನಲ್ಲಿರುವ ಬಿಎಂಸಿ-92 ಸದಸ್ಯರು ದೇಣಿಗೆ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಸೋಂಕಿತರಲ್ಲಿ ಭಯ ಕಡಿಮೆ ಮಾಡಿ ಮತ್ತು ಅವರಿಗೆ ದೃಢೀಕೃತ ಮಾಹಿತಿ ರವಾನಿಸುವ ಉದ್ದೇಶದಿಂದ ಸ್ವಯಂಸೇವಕರ ಪಡೆ‌ ಕಟ್ಟುವ ಆಲೋಚನೆಯಲ್ಲಿ ಶುರುವಾದ ಯೋಜನೆ ಈಗ,  ಬಿಎಂಸಿ-92 ತಂಡದ ವೈದ್ಯರ ಸಹಾಯದಿಂದ ಆನ್‌ಲೈನ್‌ ಆಸ್ಪತ್ರೆಯ ಸ್ವರೂಪ ಪಡೆದಿದೆ.

08047166115 ಸಹಾಯವಾಣಿ
ಕೋವಿಡ್‌ ರೋಗಿಗಳಿಗೆ ನೆರವು ನೀಡಲು ಈ ತಂಡ 08047166115 ಸಂಖ್ಯೆಯ ಸಹಾಯವಾಣಿ ಆರಂಭಿಸಿದ್ದು, ಸಹಾಯವಾಣಿಗೆ ಕರೆ ಬಂದ ತಕ್ಷಣ ವಿವರ ದಾಖಲಿಸಿಕೊಂಡು, ಆಪ್ತ ಸಮಾಲೋಚಕರಿಗೆ ವರ್ಗಾಯಿಸಲಾಗುತ್ತದೆ. ಅಗತ್ಯವಿದ್ದರೆ ರೋಗಿಗಳಿಗೆ ವೈದ್ಯರು ಕರೆಮಾಡಿ, ಮಾರ್ಗದರ್ಶನ ನೀಡಲಿದ್ದಾರೆ. ಮನೆಯಲ್ಲೇ ಪ್ರತ್ಯೇಕವಾಗಿದ್ದು, ಗುಣಮುಖರಾಗಲು ನೆರವು ಒದಗಿಸಲಾಗುವುದು. ಅಗತ್ಯ ಇರುವವರಿಗೆ ದಾನಿಗಳ ನೆರವಿನಲ್ಲಿ ಔಷಧಿ ಕಿಟ್‌ ಕೂಡ ತಲುಪಿಸಲಾಗುವುದು. ರೋಗಿಯೊಬ್ಬ ಕರೆಮಾಡಿದ ದಿನದಿಂದ ಸಂಪೂರ್ಣ ಗುಣಮುಖನಾಗುವವರೆಗೂ ಸಂಪರ್ಕದಲ್ಲಿ ಇದ್ದು, ನೆರವು ನೀಡಲಾಗುವುದು ಎಂದು ತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಬೆಡ್ ವ್ಯವಸ್ಥೆ
ಬೆಂಗಳೂರಿನಲ್ಲಿ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಂಡ ಹೇಳಿಕೊಂಡಿದೆ. ಇದಕ್ಕಾಗಿ ನಗರದ ಪ್ರತಿಷ್ಠಿತ ಆಸ್ಪತ್ರೆಗಳೊಂದಿಗೆ ಸಹಭಾಗಿತ್ವ ಪಡೆಯಲಾಗಿದೆ. ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅಲ್ಲಿಗೆ ದಾಖಲಿಸಲಾಗುವುದು. ಆಮ್ಲಜನಕ ಪೂರೈಕೆ ಇರುವ ಹಾಸಿಗೆ ಸಿಗದೇ ಇದ್ದರೆ ರೋಗಿಯ ಮನೆಗೆ ಆಮ್ಲಜನಕ ಸಾಂದ್ರಕ ಒದಗಿಸಲಾಗುವುದು ಎನ್ನಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಮಾಲೋಚನೆ ಮತ್ತು ದೃಢೀಕೃತ ಮಾಹಿತಿಯನ್ನು ಹಂಚಿಕೊಳ್ಳುವ ಕೆಲಸವನ್ನಷ್ಟೇ ಮಾಡುತ್ತಿದೆ.

SCROLL FOR NEXT